

ರಾಯಚೂರು
ಬರಹಗಾರ ಅಕ್ಷರ ರೂಪದಲ್ಲಿ ಕಾವ್ಯ ಕಟ್ಟುವಾಗ ಕಾಲ್ಪನಿಕತೆಗೆ ಒತ್ತುಕೊಡದೆ ವಾಸ್ತವದ ನೆಲೆಗಟ್ಟಿನಲ್ಲಿ ನೋವು, ನಲಿವುಗಳ ಸತ್ಯವನ್ನು ಜಗಕ್ಕೆ ತಿಳಿಸಿದಾಗ ಬರಹಗಾರ ಹೆಸರಾಗಿ ಉಳಿಯುತ್ತಾನೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯ ಡಾ.ಚಿದಾನಂದ ಸಾಲಿ ಹೇಳಿದರು.
ಸ್ಥಳೀಯ ಮೆಕ್ಕಾ ದರ್ವಾಜಾದಲ್ಲಿ ಕನ್ನಡ ಸಂಘದಿಂದ ಗುರುವಾರ ರಾತ್ರಿ ಪದವಿ ವಿದ್ಯಾರ್ಥಿಗಳ ಬೆಳದಿಂಗಳ ಕವನಗಳು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಅಕ್ಷರದಲ್ಲಿ ಅಹಂಕಾರ ಹುಟ್ಟಿಕೊಳ್ಳಬಾರದು. ಅದು ತನ್ನದೇ ಅವನತಿಗೆ ರಹದಾರಿಯಾಗುತ್ತದೆ ಎಂದರು.
ಯಾವುದೇ ಕ್ಷೇತ್ರವಿರಲಿ ಕಾಯಕ ಬಹುಮುಖ್ಯ ಪಾತ್ರ ವಹಿಸುತ್ತದೆ. ಕಾಯಕ ತಪಸ್ಸು ಜಗದ ಇತಿಹಾಸವನ್ನು ಸಾರುತ್ತಿದ್ದು, ಅಂತಹ ವ್ಯಕ್ತಿತ್ವ ನಮ್ಮದಾಗಬೇಕು. ನಮ್ಮ ಭಾಗದ ಶಾಂತರಸ, ಜಂಬಣ್ಣ ಅಮರಚಿಂತ, ಮುಕ್ತಾಯಕ್ಕ ಸೇರಿದಂತೆ ಹಲವರು ತಮ್ಮ ಸಾಹಿತ್ಯ ಕೃಷಿ ಮೂಲಕ ನಾವು ಹೆಮ್ಮೆ ಪಡುವಂತೆ ಬೆಳೆದಿದ್ದಾರೆ ಎಂದು ಹೇಳಿದರು.
ನಗರಸಭೆ ಸದಸ್ಯ ಜಯಣ್ಣ ಮಾತನಾಡಿ, ಎಲ್ಲರೂ ತಾವೇ ಬೆಳೆಯಬೇಕು ಎನ್ನುವ ತುಡಿತದಲ್ಲಿರುತ್ತಾರೆ. ಆದರೆ ಕನ್ನಡ ಸಂಘ ಎಲ್ಲರೂ ಬೆಳೆಯಲಿ ಎನ್ನುವ ಗುಣದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಂಘದ ಅಧ್ಯಕ್ಷ ಪಲುಗುಲ ನಾಗರಾಜ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದ್ದು, ವೈವಿಧ್ಯಮಯ ಕವನಗಳು ವಿದ್ಯಾರ್ಥಿಗಳಿಂದ ಮೂಡಿ ಬಂದಿರುವುದು ಸಂತಸ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರದ ಹಲವು ಪದವಿ ಕಾಲೇಜುಗಳ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕವನ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಅಕ್ಕಿ ಗಿರಣಿ ಮಾಲೀಕರ ಸಂಘದ ಕಾರ್ಯಾಧ್ಯಕ್ಷ ಸಾವಿತ್ರಿ ಪುರುಷೋತ್ತಮ, ಕೋಟೆ ಅಧ್ಯಯನ ಸಮಿತಿ ಅಧ್ಯಕ್ಷ ಕೆ.ಸತ್ಯನಾರಾಯಣ, ನಗರಸಭೆ ಮಾಜಿ ಸದಸ್ಯ ಹರೀಶ ನಾಡಗೌಡ, ಸಂಘದ ಪದಾಕಾರಿಗಳಾದ ಸಂಗಮೇಶ ಮಂಗಾನವರ, ಅಮರೇಶ ಆಶಿಹಾಳ, ಡಾ.ವಿಜಯರಾಜೇಂದ್ರ, ಜೆ.ಎಂ.ಶರಣಯ್ಯಸ್ವಾಮಿ, ವೈಶಾಲಿ ಪಾಟೀಲ್ ಉಪಸ್ಥಿತರಿದ್ದರು.