ಬರವಣಿಗೆಯಲ್ಲಿರಲಿ ಸಮಾಜ ತಿದ್ದುವ ಶಕ್ತಿ

27 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿ.ಎಚ್​. ರಾಘವೇಂದ್ರ ಕೇವಲ ಪತ್ರಕರ್ತರಾಗಿ ಗುರುತಿಸಿಕೊಂಡಿರಲಿಲ್ಲ. ಅಂಕಣಕಾರ, ನಾಟಕಕಾರರಾಗಿದ್ದರು. ಟಿಂಗರ ಬುಡ್ಡಣ್ಣ ಅಂಕಣದಿಂದ ಇಂದಿಗೂ ಜನರ ಮನಸ್ಸಿನಲ್ಲಿ ಬೇರೂರಿದ್ದಾರೆ. ಸಮಾಜದಲ್ಲಿಯ ಅಂಕು-ಡೊಂಕುಗಳನ್ನು ಹಾಸ್ಯಭರಿತವಾಗಿ ಸಮಾಜಕ್ಕೆ ತಿಳಿಸಿಕೊಡುತ್ತಿದ್ದರು ಎಂದು ಮನೋವೈದ್ಯ ಡಾ. ಆನಂದ ಪಾಂಡುರಂಗಿ ಹೇಳಿದರು.

ಜಿ.ಎಚ್​. ರಾಘವೇಂದ್ರ ಪ್ರತಿಷ್ಠಾನ ವತಿಯಿಂದ ನಗರದ ಗಾಂಧಿನಗರ ಈಶ್ವರ ದೇವಸ್ಥಾನದ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಜಿ.ಎಚ್​. ನೆನಪಿನಂಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬರವಣಿಗೆಯಲ್ಲಿ ಭಾವ, ಸಮಾಜ ತಿದ್ದುವ ಶಕ್ತಿ ಇರಬೇಕು. ಅದು ಜಿ.ಎಚ್​. ಅವರಲ್ಲಿ ಅಡಗಿತ್ತು. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವಿದ್ದರೂ ಅದನ್ನೆಲ್ಲ ನುಂಗಿ ಜನರನ್ನು ನಿತ್ಯ ನಗಿಸುತ್ತಿದ್ದರು. ಅವರು ಇಂದು ನಮ್ಮೆ ಮಧ್ಯೆ ಇಲ್ಲದಿದ್ದರೂ ಅವರ ಹಾಸ್ಯಪ್ರಜ್ಞೆ, ಮಾತು ನಮ್ಮೊಂದಿಗೆ ಸದಾ ಇರುತ್ತದೆ ಎಂದರು.

ನಾಟಕಕಾರ ಡಾ. ಗೋವಿಂದ ಮಣ್ಣೂರ ಮಾತನಾಡಿ, ಜಿ.ಎಚ್​ ಮತ್ತು ನನ್ನ ಬಾಂಧವ್ಯ ಹಳೆಯದು. ಅವರ ಕೆಲಸದ ಬಿಡುವಿನ ಸಮಯದಲ್ಲಿ ನಾವು ಭೇಟಿಯಾಗುತ್ತಿದ್ದೆವು. ಹೊಸಬರು ಯಾರೇ ಬಂದರೂ ಅಷ್ಟೊಂದು ಸಲೀಸಾಗಿ ಹೊಂದಿಕೊಳ್ಳುತ್ತಿದ್ದಿಲ್ಲ. ಆದರೆ, ಒಂದೊಮ್ಮೆ ಬೆರೆತರೆ ಎಂದಿಗೂ ಬಿಟ್ಟುಕೊಡುತ್ತಿದ್ದಿಲ್ಲ. ಆದರೆ, ಅವರಿಗೆ ಎಲ್ಲ ಕಡೆಗಳಲ್ಲಿ ಸಿಗಬೇಕಾದ ಮನ್ನಣೆ ದೊರೆಯಲಿಲ್ಲ. ಒಂದು ವೇಳೆ ಅವರಿಗೆ ಸೂಕ್ತ ಮನ್ನಣೆ ದೊರೆತಿದ್ದರೆ ಇಂದು ಅವರು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದರು ಎಂದರು.

ನಾಗರಾಜ ದೇಸಾಯಿ, ನಾಟಕ ಅಕಾಡೆಮಿ ಸದಸ್ಯ ಶಿವನಾಯಕ ದೊರೆ ಮಾತನಾಡಿದರು. ನಾಟಕಕಾರ ನಾರಾಯಣ ಭಾದ್ರಿ ಅವರಿಗೆ ಜಿ.ಎಚ್​. ರಂಗ ಪುರಸ್ಕಾರ ಪ್ರದಾನ ಮಾಡಲಾಯಿತು.

ಈಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಗುರುರಾಜ ಗುಣಸಿಮರದ ಅಧ್ಯಕ್ಷತೆ ವಹಿಸಿದ್ದರು. ಸಂದೇಶ ಜಿ.ಎಚ್​., ಭರತ ಜಿ.ಎಚ್​, ಅರವಿಂದ ಕುಲಕರ್ಣಿ, ಗಣೇಶ ಜೋಶಿ, ವಾದಿರಾಜ ನಾಗನೂರ, ಜಿ.ಎಚ್​. ರಾಘವೇಂದ್ರ ಕುಟುಂಬಸ್ಥರು, ಸ್ನೇಹಿತರು, ಇತರರು ಇದ್ದರು.

ಡಾ. ಶ್ಯಾಮಸುಂದರ ಬಿದರಕುಂದಿ ನಿರೂಪಿಸಿದರು. ನರಸಿಂಹರಾವ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net