ಬರಹದಿಂದ ಸಮಾಜದ ಬದಲಾವಣೆ ಸಾಧ್ಯ

SAHITYA NEW
Published on

ಹುಬ್ಬಳ್ಳಿ : ಬರಹಗಾರನ ಮುಂದೆಯೇ ಅವನ ಕೃತಿ ಕುರಿತ ಸಂವಾದ, ಪ್ರತಿಕ್ರಿಯೆ ಹೆಚ್ಚೆಚ್ಚು ನಡೆಯಬೇಕು. ಇದರಿಂದ ಬರಹಗಾರನಿಗೂ ಸಂತೋಷ ಹಾಗೂ ತನ್ನ ತಪ್ಪನ್ನು ತಿದ್ದಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಕಥೆಗಾರ ಬಿ.ಎಸ್. ಸೊಪ್ಪಿನ ಹೇಳಿದರು.

ಹುಬ್ಬಳ್ಳಿ ಪತ್ರಕರ್ತರ ಸಾಹಿತ್ಯ ಕೂಟದಿಂದ ಭಾನುವಾರ ಏರ್ಪಡಿಸಿದ ಕಾವ್ಯ ಸಂಗ ಕಥಾ ಪ್ರಸಂಗ ದಲ್ಲಿ ತಮ್ಮದೇ ಕೃತಿ ಜೋಡೆತ್ತಿನ ಚಕ್ಕಡಿಯ ಕುರಿತು ವಿಶ್ಲೇಷಣೆ ಹಾಗೂ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ನೆಲೆಸಿರುವವರಿಗೆ ಬರವಣಿಗೆಗೆ ಹಲವು ವಿಷಯಗಳು ಸಿಗತ್ತವೆ. ಅವುಗಳನ್ನು ಬಳಸಿಕೊಳ್ಳುವ ಮನೋಭಾವ ಕವಿಯಲ್ಲಿ ಬರಬೇಕು. ಬರಹದಿಂದ ಸಮಾಜದಲ್ಲಿ ಬದಲಾವಣೆ ತರಲು ಬರಹಗಾರ ಶ್ರಮಿಸಿಬೇಕು ಎಂದರು.

ಕವಿಯ ಭಾವನೆಯನ್ನು ಓದುಗ ಯಾವ ರೀತಿ ಗ್ರಹಿಸುತ್ತಾನೆ, ಓದುಗ ಯಾವುದನ್ನು ಬಯಸುತ್ತಾನೆ ಎಂಬುದು ಇಂತಹ ಸಂವಾದಗಳಿಂದ ತಿಳಿದು ಬರುತ್ತದೆ ಎಂದು ಹೇಳಿದರು.

ಕಥೆ ಓದುವ ಮೂಲಕ ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ ಕಾರ್ಯಕ್ರಮ ಉದ್ಘಾಟಿಸಿ, ಓದುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಮಾಜದಲ್ಲಿನ ಅಂಕು, ಡೊಂಕುಗಳನ್ನು ಬರಹದ ಮೂಲಕ ತಿಳಿಸಿ ಸರಿಪಡಿಸುವ ಕಾರ್ಯ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಸದ್ದಿಲ್ಲದೇ ಬರೆಯುವ ಕವಿಗಳನ್ನು ಪರಿಚಯಿಸುವ ಕಾರ್ಯ ನಡೆಯಬೇಕಿದೆ ಎಂದು ಸಲಹೆ ನೀಡಿದರು.

ಸಂಗಮೇಶ ಮೆಣಸಿನಕಾಯಿ, ಡಾ. ವೀರೇಶ ಹಂಡಿಗಿ, ನಿರ್ಮಲಾ ಶೆಟ್ಟರ, ಎಚ್.ಡಿ. ತೇಜಾವತಿ, ಜನಮೇಜಯ ಉಮರ್ಜಿ ಅವರು ಜೋಡೆತ್ತಿನ ಚಕ್ಕಡಿಯಲ್ಲಿನ ಕಥೆಗಳ ಕುರಿತು ವಿಶ್ಲೇಷಿಸಿದರು.

ಕವಿಗೋಷ್ಠಿಯಲ್ಲಿ ಪ್ರಕಾಶ ಕಡಮೆ, ಗಾಯತ್ರಿ ರವಿ, ಅಶ್ವಿನಿ ಕಂಬಳಿ, ಭಾಗ್ಯಶ್ರೀ ರಜಪೂತ, ವಿರೂಪಾಕ್ಷ ಕಟ್ಟಿಮನಿ, ಶಿವಾನಂದ ಉಳ್ಳಿಗೇರಿ ಸ್ವರಚಿತ ಕವನಗಳನ್ನು ನಿವೇದಿಸಿದರು.

ಕಾರ್ಯಕ್ರಮ ಸಂಯೋಜಕ ಸುಶೀಲೇಂದ್ರ ಕುಂದರಗಿ ಸ್ವಾಗತಿಸಿ, ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net