

ಬಾಗಲಕೋಟೆ:ಜ್ಞಾನವು ಭಾಷೆಗಿಂತ ದೊಡ್ಡದಾಗಿದ್ದು, ನಿರಂತರ ಅಧ್ಯಯನದಿಂದ ಭಾಷಾ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಾಧ್ಯ. ಓದುವ, ಗ್ರಹಿಸುವ ಮತ್ತು ಕಲ್ಪನಾ ಪ್ರವೃತ್ತಿ ಬೆಳೆಸಿಕೊಳ್ಳಲು ಬರವಣಿಗೆ ಉತ್ತಮವ ಮಾಧ್ಯಮ ಎಂದು ವಿಶ್ರಾಂತ ಪ್ರಾಚಾರ್ಯ ಡಾ.ವಿ.ಎಸ್ ಕಟಗಿಹಳ್ಳಿಮಠ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ಸೋಮವಾರ ಕರ್ನಾಟಕ ಸಾಹಿತ್ಯ ಸಂಘ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಬರವಣಿಗೆ ಕೌಶಲ ಸರ್ಟಿಫಿಕೆಟ್ ಕೋರ್ಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾವಿರಾರು ವಷರ್ಗಳಿಂದ ಭಾಷೆಗಳು ಸರಳಿಕರಣವಾಗುತ್ತ ಸುಲಭ ಭಾಷೆಗಳಾಗಿ ಬಂದಿದ್ದು, ಇದಕ್ಕೆ ಬರವಣಿಗೆ ಮೂಲವಾಗಿದೆ ಎಂದರು.
ಎಲ್ಲರೂ ಮಾತುಗಳನ್ನಾಡಬಹುದು. ಆದರೆ, ಮೆಚ್ಚುಗೆಯಾಗುವ ಬರವಣಿಗೆ ಬರೆಯಬೇಕಾದರೆ ಕೌಶಲ ಮುಖ್ಯ. ಬರವಣಿಗೆಗೂ ತನ್ನದೆಯಾದ ಭಾಷೆ ಇದೆ. ಹಿರಿಯ ದರ್ಜೆಯ ಸ್ಪರ್ಧಾತ್ಮಕ ಪರೀಕ್ಷೆಗಳು ಪರಿಣಾಮಕಾರಿ ಬರವಣಿಗೆಯನ್ನು ನಿರೀಕ್ಷಿಸುವುದರಿಂದ ಪರೀಕ್ಷೆಗಳನ್ನು ಎದುರಿಸುವ ಕ್ರಮ ಗೊತ್ತಿದ್ದರೆ ಐಎಎಸ್, ಕೆಎಎಸ್ ಪರೀಕ್ಷೆಗಳನ್ನು ಎದುರಿಸುವುದು ಸುಲಭ ಎಂದು ಹೇಳಿದರು.
ಸಂಕ್ಷಿಪ್ತ ಬರವಣಿಗೆಯಲ್ಲಿ ಸಮಗ್ರ ವಿವರಣೆಯನ್ನು ನೀಡಬೇಕಾದರೆ ಭಾಷೆಯ ಮಿತಿ ಅರಿತಿರಬೇಕು. ಬಡತನ, ಸಿರಿತನದ ಆಧಾರದ ಮೇಲೆ ಸಾಧಕರಾಗಲು ಸಾಧ್ಯವಿಲ್ಲ. ಆತ್ಮಸ್ಥೈರ್ಯ ಮತ್ತು ಛಲದಿಂದ ಮಾತ್ರ ಗುರಿ ತಲುಪಲು ಸಾಧ್ಯ. ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆಯೇ ಮೊದಲ ಭಾಷೆಯಾಗಿದ್ದು, ಅದಕ್ಕೆ ಬೇಕಾದಷ್ಟು ಪುರಾವೆಗಳಿವೆ. ಇಂತಹ ಭಾಷೆಯನ್ನು ಉಳಿಸಿಕೊಂಡು ಹೋಗುವ ಕಲೆಯನ್ನು ಬೆಳೆಸಿಕೊಳ್ಳಬೇಕಿದೆ ಎಂದರು.
ಪ್ರಾಚಾರ್ಯ ಪ್ರೊ.ಎಸ್.ಆರ್.ಮುಗನೂರಮಠ ಮಾತನಾಡಿ, ಮಾತುಗಳು ಕ್ಷಣಿಕ ರೂಪವಾಗಿದ್ದು ಅದನ್ನು ಶಾಶ್ವತವಾಗಿ ಉಳಿಸಲು ಬರವಣಿಗೆಯಿಂದ ಮಾತ್ರ ಸಾಧ್ಯ. ವಿಷಯ ವಸ್ತುಗಳನ್ನು ಪ್ರಶ್ನಾರ್ಥಕ ರೂಪದಲ್ಲಿ ನೋಡುವುದನ್ನು ಕಲಿತರೆ ಅರಿವನ್ನು ಬೆಳೆಸಿಕೊಳ್ಳಬಹುದು. ಬರಹ ದಾಖಲೆಯಾಗುವ ವಿಧಾನವಾಗಿದ್ದು, ಕಥೆ, ಸಾಹಿತ್ಯ, ಕಲೆ, ವಿಜ್ಞಾನ ಪ್ರತಿಯೊಂದಕ್ಕೂ ತನ್ನದೆಯಾದ ಬರಹ ಕೌಶಲಗಳಿರುತ್ತವೆ. ಅವುಗಳನ್ನು ವಿದ್ಯಾರ್ಥಿ ಜೀವನದಲ್ಲಿ ಬೆಳೆಸಿಕೊಳ್ಳಬೇಕು. ಭಾಷೆಯನ್ನು ಬರೆಯದಿದ್ದರೆ ಭಾಷೆಯು ಸತ್ತಂತೆ, ಭಾಷೆಯನ್ನು ಬರೆಯಲು ಕಲಿಯದಿದ್ದರೆ ಮನುಷ್ಯನು ಬದುಕಿಯೂ ಸತ್ತಂತೆ ಎಂದು ಹೇಳಿದರು.
ಪ್ರಾಧ್ಯಾಪಕ ಡಾ.ಎಸ್.ಡಿ ಕೆಂಗಲಗುತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಡಾ. ಎ.ಯು. ರಾಠೋಡ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ವೀರುಪಾಕ್ಷ ಎನ್.ಬಿ., ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.