ಬರವಣಿಗೆಗೆ ಮನುಷ್ಯನನ್ನು ಬದಲಾಯಿಸುವ ಶಕ್ತಿ ಇದೆ: ಬಾಳೆಯಡ ಕಾಳಪ್ಪ

kodavamakkada kuta
Published on

ಮಡಿಕೇರಿ: ಬರವಣಿಗೆಗೆ ಮನುಷ್ಯನ ಜೀವನವನ್ನು ಬದಲಾಯಿಸುವ ಅದ್ಭುತವಾದ ಶಕ್ತಿ ಇದೆ ಎಂದು ಬ್ಲೂ ಡಾರ್ಟ್ ಸಲಹೆಗಾರ ಹಾಗೂ ಹಿರಿಯ ಕ್ರೀಡಾಪಟು ಬಾಳೆಯಡ ಕಾಳಪ್ಪ ಅಭಿಪ್ರಾಯಪಟ್ಟರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಕೊಡವ ಮಕ್ಕಡ ಕೂಟದ ೧೦೮ನೇ ಮತ್ತು ಲೇಖಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ರಚಿತ ೧೦ನೇ ಪುಸ್ತಕ ಜೇನು ಗೂಡು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪುಸ್ತಕಗಳು ಮನುಷ್ಯನ ಜೀವನದಲ್ಲಿ ಬದಲಾವಣೆಯನ್ನು ತರಲು ಶಕ್ತವಾಗಿವೆ. ಬರಹಗಾರರು ತಮಗಾಗಿ ಅಥವಾ ಸಮಾಜದ ಕಲ್ಯಾಣಕ್ಕಾಗಿ ಪುಸ್ತಕಗಳನ್ನು ಬರೆಯಬಹುದು. ಆದರೆ ಬರವಣಿಗೆಯಲ್ಲಿರುವ ಶಕ್ತಿ ಸಾಮಾಜಿಕ ಪರಿವರ್ತನೆಗೆ ಸಹಕಾರಿಯಾಗಿದೆ ಎಂದರು.

ಪುಸ್ತಕಗಳನ್ನು ಹೆಚ್ಚು ಓದುವ ಮೂಲಕ ಉತ್ತಮ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬರೆಯುವುದರಿಂದ ಅಥವಾ ಓದುವ ಹವ್ಯಾಸದಿಂದ ಜೀವನದ ಕುಂದು ಕೊರತೆ ಮತ್ತು ವ್ಯತ್ಯಾಸಗಳು ದೂರವಾಗುತ್ತವೆ. ಮಕ್ಕಳ ಜೀವನದಲ್ಲಿ ತಂದೆ ತಾಯಿಗಳ ಪಾತ್ರ ದೊಡ್ಡದಾಗಿರುತ್ತದೆ. ತಂದೆ ನಂಬಿಕೆಯಾದರೆ, ತಾಯಿ ಸತ್ಯವಾಗುತ್ತಾಳೆ, ಇವರಿಬ್ಬರು ದೇವರಿಗೆ ಸಮಾನರು. ಇಂದಿನ ಮನುಕುಲ ವಸ್ತುಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದು, ಜೀವಮಾನದ ಮೇಲಿನ ಕಾಳಜಿ ಕಡಿಮೆಯಾಗುತ್ತಿದೆ ಎಂದು ಬಾಳೆಯಡ ಕಾಳಪ್ಪ ಬೇಸರ ವ್ಯಕ್ತಪಡಿಸಿದರು.

ಇಂದು ಬಿಡುಗಡೆಯಾದ ಜೇನು ಗೂಡು ಪುಸ್ತಕ ಮನುಷ್ಯನ ಜೀವನದ ವಾಸ್ತವಕ್ಕೆ ಹತ್ತಿರವಾಗಿದೆ. ಬರವಣಿಗೆಯಲ್ಲಿ ಬಲವಿದೆ, ಪ್ರಭಾವ ಬೀರುವ ಶಕ್ತಿ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜೇನು ಗೂಡು ಪುಸ್ತಕದ ಬರಹಗಾರ್ತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮಾತನಾಡಿ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಅಂಶಗಳು ಪುಸ್ತದಲ್ಲಿದ್ದು, ಓದುಗರು ಇದನ್ನು ಗಮನಿಸಿದರೆ ನನ್ನಲ್ಲಿ ಧನ್ಯತಾಭಾವ ಮೂಡಲಿದೆ. ಪ್ರತಿಯೊಬ್ಬರು ಪುಸ್ತಕ ಕೊಂಡು ಓದಿ ಎಂದು ಮನವಿ ಮಾಡಿದರು.

ಮಡಿಕೇರಿ ಕೊಡವ ಸಮಾಜದ ನಿರ್ದೇಶಕಿ ಬೊಪ್ಪಂಡ ಸರಳ ಕರುಂಬಯ್ಯ ಮಾತನಾಡಿ, ಮಕ್ಕಳು ಪುಸ್ತಕಗಳನ್ನು ಹೆಚ್ಚು ಓದಬೇಕು. ಈಗಿನ ಮಕ್ಕಳು ಇಂಗ್ಲೀಷ್ ಪುಸ್ತಕಗಳನ್ನಷ್ಟೇ ಓದುವ ಹವ್ಯಾಸ ಹೊಂದಿದ್ದಾರೆ. ಇಂಗ್ಲೀಷ್ ನೊಂದಿಗೆ ಕನ್ನಡವನ್ನು ಕೂಡ ಓದಲಿ ಎಂದು ಕಿವಿಮಾತು ಹೇಳಿದರು.

ನಮ್ಮ ಮನಸ್ಸಿನ ಕಲ್ಪನೆಗಳಿಗೆ ಭಾವನೆಗಳನ್ನು ತುಂಬಿ ಸಾಹಿತ್ಯದ ರೂಪ ನೀಡಲಾಗುತ್ತದೆ. ಬರವಣಿಗೆಯನ್ನು ಪುಸ್ತಕದ ರೂಪದಲ್ಲಿ ಹೊರ ತರಲು ಪ್ರೋತ್ಸಾಹ ನೀಡುತ್ತಿರುವ ಕೊಡವ ಮಕ್ಕಡ ಕೂಟದ ಸಾಹಿತ್ಯಾಸಕ್ತಿ ಮತ್ತು ೧೦೮ ಪುಸ್ತಕಗಳ ಸಾಧನೆ ಶ್ಲಾಘನೀಯವೆಂದರು.

ಮೂರ್ನಾಡು ಕೊಡವ ಸಮಾಜದ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಪಳಂಗಂಡ ರೇಖಾ ತಮ್ಮಯ್ಯ ಮಾತನಾಡಿ ಜೇನು ಗೂಡು ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಹಿತ್ಯಾಸಕ್ತಿ ಇನ್ನೂ ಹೆಚ್ಚಾಗಿ ಪ್ರಶಸ್ತಿಗಳು ಲಭಿಸಲಿ ಎಂದರು.

ಕಾರ್ಯಕ್ರಮದಲ್ಲಿ ಕೊಡವ ಮಕ್ಕಡ ಕೂಟದ ನಿರ್ದೇಶಕಿ ಹಾಗೂ ಬರಹಗಾರ್ತಿ ಕರವಂಡ ಸೀಮಾ ಗಣಪತಿ ಉಪಸ್ಥಿತರಿದ್ದರು.

ಬಾಲಿವುಡ್ ಚಿತ್ರವಾದ ಸ್ಕೈ ಫೋರ್ಸ್ ಪುಸ್ತಕ

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಪತ್ರಕರ್ತ ಹಾಗೂ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರು ಬರೆದ ಕೊಡವ ಮಕ್ಕಡ ಕೂಟ ಹೊರತಂದ ೧೯೬೫ರ ಯುದ್ಧ ಹಾಗೂ ಕೊಡಗಿನ ಮಹಾವೀರ(ಮಹಾವೀರ ಪುರಸ್ಕೃತ ಸ್ಕ್ವಾ.ಲೀ ಅಜ್ಜಮಾಡ ಬಿ.ದೇವಯ್ಯ ಅವರ ಜೀವನಾಧರಿತ) ಕುರಿತಾದ ಪುಸ್ತಕ ಸ್ಕೈ ಫೋರ್ಸ್ ಎಂಬ ಹೆಸರಿನಲ್ಲಿ ಬಾಲಿವುಡ್ ಚಿತ್ರವಾಗಿದೆ. ಈ ಚಿತ್ರ ಇದೇ ಜ.೨೪ರಂದು ತೆರೆ ಕಾಣುತ್ತಿದ್ದು, ಇದು ಕೊಡವ ಮಕ್ಕಡ ಕೂಟದ ಹೆಗ್ಗಳಿಕೆಗೆ ಕಾರಣವಾಗಿದೆ ಮತ್ತು ಕೊಡಗು ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದರು.

ಈಗಾಗಲೇ ಮಹತ್ವಾಕಾಂಕ್ಷೆಯ ೧೦೦ನೇ ಪುಸ್ತಕವನ್ನು ಸಾಹಿತ್ಯ ಲೋಕಕ್ಕೆ ಅದ್ದೂರಿಯಾಗಿ ಸಮರ್ಪಿಸಿರುವ ಕೊಡವ ಮಕ್ಕಡ ಕೂಟ ೨೦೨೪ರಲ್ಲಿ ಬರೋಬರಿ ೨೭ ಪುಸ್ತಕಗಳನ್ನು ಬಿಡುಗಡೆ ಮಾಡಿ ಪ್ರಶಂಸೆಗೆ ಪಾತ್ರವಾಗಿದೆ. ಕೂಟ ಪ್ರಕಟಿಸಿರುವ ೧೦೭ ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಅಗ್ನಿಯಾತ್ರೆ ಪುಸ್ತಕಕ್ಕೆ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಮುಂದಿನ ದಿನಗಳಲ್ಲಿ ಕೂಡ ಅಧ್ಯಯನ ಹಾಗೂ ಸಂಶೋಧನೆಗೆ ಆದ್ಯತೆ ನೀಡುವ ದಾಖಲೀಕರಣದ ಪುಸ್ತಕಗಳನ್ನು ಹೊರ ತರಲಾಗುವುದು ಎಂದು ಬೊಳ್ಳಜಿರ ಬಿ.ಅಯ್ಯಪ್ಪ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net