ಸಮರ್ಥವಾಗಿ ಭಾಷಾಂತರಿಸಬಲ್ಲ ಲೇಖಕಿಯರು ಅಪರೂಪ

mysore
Published on

ಮೈಸೂರು: ಒಂದು ಭಾಷಾ ಸಾಹಿತ್ಯವನ್ನು ಮತ್ತೊಂದು ಭಾಷೆಗೆ ಮೂಲ ಕೃತಿಗೆ ಕಿಂಚಿತ್ತೂ ಚ್ಯುತಿ ಬಾರದಂತೆ ಸಮರ್ಥವಾಗಿ ಭಾಷಾಂತರಿಸಬಲ್ಲ ಲೇಖಕಿಯರು ಬಹಳ ಅಪರೂಪ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.


‘ತಲ್ಲಣಗಳ ನಡುವೆ’ ಅನುವಾದಿತ ಕಾದಂಬರಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಶ್ರೇಷ್ಠ ಅನುವಾದಿತ ಕಾದಂಬರಿ ಎಂದು ಪ್ರಶಸ್ತಿ ದೊರೆತಿರುವುದರ ಹಿನ್ನೆಲೆಯಲ್ಲಿ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದಿಂದ ಕಾದಂಬರಿಗಾರ್ತಿ ವಿಜಯಾ ಶಂಕರ್ ಅವರ ಸ್ವಗೃಹದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.


ವಿಜಯಾ ಶಂಕರ್ ಕಾವ್ಯನಾಮದ ಕಾದಂಬರಿಗಾರ್ತಿ, ಲೇಖಕಿ ಎ.ವಿಜಯಕುಮಾರಿ ಅವರಿಗೆ ಈಗಾಗಲೇ ದೊರೆಯಬೇಕಾಗಿದ್ದ ಮನ್ನಣೆ, ಗೌರವ, ಪುರಸ್ಕಾರ ಇನ್ನೂ ದೊರೆತಿಲ್ಲ. ಇವರು ಹಲವು ದಶಕಗಳಿಂದ ಸಾಹಿತ್ಯ ಕೃಷಿಯೊಂದಿಗೆ ಅನುವಾದ ಸಾಹಿತ್ಯದಲ್ಲಿ ಬಹಳ ಅಪರೂಪವೆಂಬಂತೆ ಸಾಧನೆ ಮಾಡಿದ್ದಾರೆ ಎಂದರು.


ಅನುವಾದ ಸಾಹಿತ್ಯದಲ್ಲಿ ವಿಜಯಾ ಶಂಕರ್ ಅವರದು ಬಹುದೊಡ್ಡ ಹೆಸರಾಗಿದ್ದು ಈವರೆಗೂ ತೆಲುಗು ಭಾಷೆಯ ಸುಪ್ರಸಿದ್ಧ ಲೇಖಕ-ಲೇಖಕಿಯರ 30ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಿದ್ದಾರೆ ಎಂದರು.


ಮೂಲತಃ ಬೆಂಗಳೂರು ಜಿಲ್ಲೆಯ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿಯವರಾದ ವಿಜಯಾಶಂಕರ ಅವರ ಬದುಕು- ಬರಹ, ಸಾಧನೆ-ಸಿದ್ಧಿಯ ಕರ್ಮಭೂಮಿ ಸಾಂಸ್ಕೃತಿಕ ನಗರಿ ಮೈಸೂರು ನಗರವಾಗಿದ್ದು, ಅವರು ತಮ್ಮ ಕೃತಿಗಳ ಮೂಲಕ ಇಲ್ಲಿನ ಕೀರ್ತಿಯನ್ನೂ ಬೆಳಗುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ವಿಶೇಷ ಪಾಂಡಿತ್ಯ ಗಳಿಸಿರುವ ಇವರು ಕನ್ನಡದಿಂದ ತೆಲುಗಿಗೆ ಹಾಗೂ ತೆಲುಗಿನಿಂದ ಕನ್ನಡಕ್ಕೆ ಅನೇಕ ಶ್ರೇಷ್ಠ ಕೃತಿಗಳನ್ನು ಅನುವಾದಿಸಿ ತಮ್ಮ ಪ್ರತಿಭಾ ಸಾಮರ್ಥ್ಯ ಮೆರೆದ್ದಾರೆ ಎಂದರು


ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕಿ, ಶಿಕ್ಷಣ ತಜ್ಞೆ ಪಿ.ಶಾರದಮ್ಮ , ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ, ಪ್ರಾಧ್ಯಾಪಕಿ ಪ್ರೊ.ವಿಜಯಾ, ಪ್ರೌಢಶಾಲಾ ಮುಖ್ಯ ಶಿಕ್ಷಕ ಜೆ.ಮಧು, ಕನ್ನಡ ಭಾಷಾ ಸಂಪನ್ಮೂಲ ವ್ಯಕ್ತಿ ಎಂ .ಎನ್. ಸುರೇಶ್, ಲೇಖಕಿ, ಕಲಾವಿದೆ ಡಾ.ಜಮುನಾರಾಣಿ ಮಿರ್ಲೆ, ನಿವೃತ್ತ ಶಿಕ್ಷಕರಾದ ನಾಗಣ್ಣ, ಶ್ರೀಕಂಠಶೆಟ್ಟಿ , ಶೇಷಾದ್ರಿ, ಎಚ್.ವಿ. ಮುರಳೀಧರ್, ಚಿತ್ರಕಲಾ ಶಿಕ್ಷಕ ಮನೋಹರ್ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net