ಕಥೆಗಾರ, ಕಾದಂಬರಿಕಾರ, ವಿಮರ್ಶಕ ಮೊಗಳ್ಳಿ ಗಣೇಶ್ ಇನ್ನಿಲ್ಲ: ಕಳಚಿತು ಸಾಹಿತ್ಯ ಲೋಕದ ಮತ್ತೊಂದು ಕೊಂಡಿ! Mogalli Ganesh

Mogalli Ganesh
Published on

Mogalli Ganesh : ಕನ್ನಡ ಸಾಹಿತ್ಯದ ಪ್ರಮುಖ ಕಥೆಗಾರ, ಕಾದಂಬರಿಕಾರ, ಪ್ರಬಂಧಕಾರ ಹಾಗೂ ವೈಚಾರಿಕ ವಿಮರ್ಶಕರಾಗಿ ಗುರುತಿಸಿಕೊಂಡಿದ್ದ ಮೊಗಳ್ಳಿ ಗಣೇಶ್ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಇಂದು (ಅ.05) ಕೊನೆಯುಸಿರೆಳೆದಿದ್ದಾರೆ.

ಮೊಗಳ್ಳಿ ಗಣೇಶ್​ ಅವರಿಗೆ 62 ವರ್ಷ ವಯಸ್ಸಾಗಿತ್ತು. ಅವರ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಅಂಗಾಂಗ ವೈಫಲ್ಯದಿಂದಾಗಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಮೊಗಳ್ಳಿ ಗಣೇಶ್​ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ಮದ್ದೂರು ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅಂದಹಾಗೆ, ಮೊಗಳ್ಳಿ ಗಣೇಶ್ ಅವರು 1963, ಜುಲೈ 1ರಂದು ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನ ಹಳ್ಳಿಯಲ್ಲಿ ಜನಿಸಿದರು. ಬಾಲ್ಯದ ದಿನಗಳನ್ನು ಹಳ್ಳಿಯಲ್ಲಿ ಕಳೆದ ಗಣೇಶ್​ ಅವರು ಹಳ್ಳಿ ಜೀವನದ ಅನುಭವಗಳನ್ನು ಆಧರಿಸಿ ಅವರು ವಿಶಿಷ್ಟ ಕಥೆಗಳನ್ನು ಬರೆಯುತ್ತಿದ್ದರು. ಅವರು ಬರೆದ ಬುಗುರಿ, ನನ್ನಜ್ಜನಿಗೊಂದಾಸೆಯಿತ್ತು, ಒಂದು ಹಳೆಯ ಚಡ್ಡಿ ಇತ್ಯಾದಿ ಕಥೆಗಳು ಕನ್ನಡದ ಅತ್ಯುತ್ತಮ ಸಣ್ಣ ಕಥೆಗಳಾಗಿ ಗುರುತಿಸಲ್ಪಟ್ಟಿವೆ.

ಪ್ರಮುಖ ಕೃತಿಗಳು

* ಕಥಾಸಂಗ್ರಹಗಳು: ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆ ಮಳೆ, ದೇವರ ದಾರಿ.

* ಕಾದಂಬರಿ: ತೊಟ್ಟಿಲು.

* ಪ್ರಬಂಧ ಸಂಗ್ರಹ: ಕಥನ

* ಕಾವ್ಯ ಸಂಗ್ರಹ: ಸೂರ್ಯನನ್ನು ಬಚ್ಚಿಡಬಹುದೆ?

* ವಿಮರ್ಶೆ: ಸೊಲ್ಲು (ಸಾಂಸ್ಕೃತಿಕ ವಿಮರ್ಶೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net