ಹುಟ್ಟೂರಿಗೆ ಭಗೀರಥನಾದ ಸಾಹಿತಿ ಎಸ್.ಎಲ್.ಭೈರಪ್ಪ!

Untitled
Published on

ಹಾಸನ: ನಾಡಿನ ಹೆಸರಾಂತ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಹುಟ್ಟೂರಾದ ಸಂತೇಶಿವರ ಗ್ರಾಮಕ್ಕೆ ನೀರು ಹರಿಸುವ ಮೂಲಕ ತಾವು ಆಡಿ ಬೆಳೆದ ಗ್ರಾಮದ ಭಗೀರಥರಾಗಿದ್ದಾರೆ. ಹೌದು, ದಶಕಗಳ ಕನಸಾಗಿದ್ದ ಸಂತೇಶಿವರ ಏತ ನೀರಾವರಿ ಯೋಜನೆ ಪೂರ್ಣಗೊಂಡಿದ್ದು ಈ ಹಂಗಾಮಿನಿಂದಲೇ ಸಂತೇಶಿವರ ಕೆರೆಗೆ ನೀರು ಹರಿದುಬರಲಿದೆ.

ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಗ್ರಾಮದ 150 ಎಕರೆ ವ್ಯಾಪ್ತಿಯಲ್ಲಿ ಹರಡಿರುವ ವಿಶಾಲವಾದ ಕೆರೆ ತುಂಬಿ ಬರೋಬ್ಬರಿ 40 ವರ್ಷಗಳೇ ಆಗಿದ್ದವು. ಅದಕ್ಕೂ ಹಿಂದೆ ತಗ್ಗುಪ್ರದೇಶವಾಗಿರುವ ಸಂತೇಶಿವರ ಗ್ರಾಮದ ಕೆರೆ ಆಗ ಬೀಳುತ್ತಿದ್ದ ಮಳೆಗೆ ಸುತ್ತಮುತ್ತಲ ಗ್ರಾಮಗಳಿಂದ ನೀರು ಹರಿದು ಪ್ರತಿವರ್ಷ ಕೆರೆ ತುಂಬಿತಿತ್ತು. ಕಾಲ ಕಳೆದಂತೆ ಕೊಳವೆ ಬಾವಿಗಳ ಸಂಖ್ಯೆ ಹೆಚ್ಚಳವಾಯಿತು. ಬಾವಿಯ ಆಳವೂ ಹೆಚ್ಚುತ್ತಾ ಹೋಯಿತು. ಹೀಗೆ ಹೆಚ್ಚಾದಂತೆಲ್ಲಾ, ಮಳೆಯೂ ಸರಿಯಾಗಿ ಬೀಳದೆ ಕೆರೆ ತುಂಬದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ಇಡೀ ಗ್ರಾಮವೇ ಊರು ತೊರೆಯುವಂತಹ ಸ್ಥಿತಿಗೆ ತಲುಪಿತು.

2019ರ ಸಮಯದಲ್ಲಿ ಇದೇ ಗ್ರಾಮದಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಿ ಅದಕ್ಕೆ ಮುಖ್ಯ ಅತಿಥಿಯಾಗಿ ಎಸ್.ಎಲ್.ಭೈರಪ್ಪ ಅವರನ್ನು ಕರೆಸಿದರು. ಕಾರ್ಯಕ್ರಮ ಮುಗಿದ ಬಳಿಕ ಗ್ರಾಮಸ್ಥರೆಲ್ಲ ಬಂದು ‘ಕೆರೆ ನೀರು ತುಂಬಿಸಿಕೊಡುವಂತೆ ಸರ್ಕಾರದವರಿಗೆ ಹೇಳಿ, ನೀವು ಹೇಳಿದರೆ ಕೇಳುತ್ತಾರೆ,’ ಎಂದು ಅವಲತ್ತುಕೊಂಡರು. ಆಗ ಭೈರಪ್ಪ ಅವರು ‘ನಾನು ಒಬ್ಬ ಸಾಹಿತಿ. ನನ್ನ ಮಾತನ್ನು ರಾಜಕಾರಣಿಗಳು ಕೇಳುತ್ತಾರೆ ಎಂಬ ನಂಬಿಕೆ ನನಗಿಲ್ಲ.’ ಎಂದು ಹೇಳಿ ಹೋಗಿದ್ದರು. ಆದರೆ ಮನೆಗೆ ಹೋದ ಬಳಿಕ ಈ ವಿಷಯ ಭೈರಪ್ಪ ಅವರನ್ನು ಕಾಡಲು ಆರಂಭಿಸಿದೆ. ಅವರು ಯಾವುದನ್ನು ಅಷ್ಟಾಗಿ ಮನಸಿಗೆ ತೆಗೆದುಕೊಳ್ಳುವುದಿಲ್ಲ. ತೆಗೆದುಕೊಂಡರೆ ಅದು ಪೂರ್ತಿ ಆಗುವವರೆಗೂ ತಪಸ್ಸಿನಂತೆ ತೆಗೆದುಕೊಳ್ಳುತ್ತಾರೆ ಎಂದು ಅಂದಿನ ಘಟನೆಗಳನ್ನು ನೆನಪು ಮಾಡಿಕೊಳ್ಳುತ್ತಾರೆ ಅವರ ಸೋದರ ಸಂಬಂಧಿ ಕೃಷ್ಣ ಪ್ರಸಾದ್ ಅವರು.

2019ರ ದಸರಾ ಉದ್ಘಾಟನೆಗೆ ಭೈರಪ್ಪ ಅವರನ್ನು ಆಹ್ವಾನಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೈಸೂರಿನ ಅವರ ನಿವಾಸಕ್ಕೆ ಹೋದಾಗ ‘ನೀವು ನನಗೆ ಒಂದು ಸಹಾಯ ಮಾಡಬೇಕು. ನಾನು ಹುಟ್ಟಿ, ಆಡಿ ಬೆಳೆದ, ನನ್ನ ಸಾಹಿತ್ಯ ಪೂರಕ ವಾತಾವರಣ ಕಲ್ಪಿಸಿದ ನನ್ನ ಹುಟ್ಟೂರಿನ ಕೆರೆಯನ್ನು ತುಂಬಿಸಿಕೊಡಬೇಕು,’ ಎಂದು ಮನವಿ ಮಾಡಿಕೊಳ್ಳುತ್ತಾರೆ. ಅದಕ್ಕೆ ಯಡಿಯೂರಪ್ಪ ಅವರೂ ಸಹ ಸಂತೋಷದಿಂದ ಒಪ್ಪಿಗೆ ಸೂಚಿಸುತ್ತಾರೆ. ಬಜೆಟ್‌ನಲ್ಲೂ ಯೋಜನೆ ಘೋಷಣೆ ಮಾಡುತ್ತಾರೆ.

ಆ ನಂತರ ಕೆರೆಗೆ ನೀರು ಹರಿಸಲು ಭೈರಪ್ಪ ಅವರು ಭಗೀರಥನ ಪ್ರಯತ್ನವನ್ನೇ ಮಾಡಬೇಕಾಯಿತು. ಹಲವು ತಾಂತ್ರಿಕ ಕಾರಣಗಳಿಂದ ಯೋಜನೆ ಮತ್ತೆ ನನೆಗುದಿಗೆ ಬೀಳುತ್ತದೆ. ಇದಕ್ಕಾಗಿ ಭೈರಪ್ಪನವರು ಸರ್ಕಾರಕ್ಕೆ ಹತ್ತು ಪತ್ರವನ್ನು ಬರೆಯುತ್ತಾರೆ. ಆದರೂ ಆಶಾದಾಯಕ ಬೆಳವಣಿಗೆ ಕಾಣಲಿಲ್ಲ. ಆಗ ಸಿಎಂ ಸ್ಥಾನಕ್ಕೆ ಬಂದ ಬಸವರಾಜ ಬೊಮ್ಮಾಯಿ ಅವರು ತಮ್ಮ ಆಡಳಿತದ ಕೊನೆಯ ಅವಧಿಯಲ್ಲಿ ಸಂತೇಶಿವರ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಿ 25 ಕೋಟಿ ರೂ. ರಿಸರ್ವ್ ಫಂಡ್ ಇರಿಸಿ ಅಧಿಕಾರದಿಂದ ಕೆಳಗೆ ಇಳಿಯುತ್ತಾರೆ. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಣ ಬಿಡುಗಡೆ ಮಾಡಿತು. ಅಲ್ಲಿಂದ ಯೋಜನೆಗೆ ಮರುಜೀವ ಸಿಕ್ಕಿತು.

ಜಾಬಘಟ್ಟದಿಂದ ಜಾಕ್‌ವೆಲ್ ನಿರ್ಮಿಸಿ ಅಲ್ಲಿಂದ 9 ಕಿ.ಮೀ. ಪೈಪ್‌ಲೈನ್ ಮೂಲಕ ಮತ್ತು ಎರಡು ಕಿ.ಮೀ. ಭೂಮಿಯ ಗುರುತ್ವಾಕರ್ಷಣೆ ಮೂಲಕ ಸಂತೇಶಿವರ ಗ್ರಾಮಕ್ಕೆ ನೀರು ತರುವ ಕೆಲಸ ನಡೆಯುತ್ತದೆ. ಈ ವೇಳೆ ಇಲ್ಲೂ ಕೆಲವೊಂದು ಅಡಚಣೆ ಎದುರಾಗುತ್ತದೆ. ಓರ್ವ ರೈತ ತಮ್ಮ ಭೂಮಿಯ ಕೆಳಗೆ ಪೈಪ್ ಹಾದುಹೋಗಲು ಜಾಗ ನೀಡುವುದಿಲ್ಲ ಎಂದು ಅಡ್ಡಗಾಲಾಗುತ್ತಾರೆ. ಯಾರು ಎಷ್ಟೇ ಮನವಿ ಮಾಡಿದರೂ ಅವರು ಮಾತ್ರ ಒಪ್ಪಿಗೆ ಸೂಚಿಸುವುದಿಲ್ಲ. ಕೊನೆಗೆ ಎಸ್.ಎಲ್. ಭೈರಪ್ಪ ಅವರೇ ಆ ರೈತನ ಮನೆಗೆ ಅವಕಾಶ ನೀಡುವಂತೆ ಮನವಿ ಮಾಡುತ್ತಾರೆ. ಆಗ ಒಪ್ಪಿದ ರೈತ ಆನಂತರ ಮತ್ತದೆ ತಗಾದೆ ತೆಗೆಯುತ್ತಾನೆ. ಕೊನೆಗೂ ಆತನ ಮನ ಒಲಿಸಲಾಗುತ್ತದೆ.

ಬಳಿಕ ಏತನೀರಾವರಿ ಯೋಜನೆಯಡಿ ನೀರು ಸಲೀಸಾಗಿ ಸಂತೇಶಿವರ ಗ್ರಾಮದ ಕೆರೆಗೆ ಹರಿದುಬರುತ್ತದೆ. ಈ ಒಂದು ಕೆರೆ ತುಂಬಿದ್ದರಿಂದ ಸುತ್ತಮುತ್ತಲಿನ 20 ಹಳ್ಳಿಗಳ ಕೆರೆ ತುಂಬುವಂತಾಗಿದೆ. ಅಗ್ರಹಾರ ಬೆಳಗುಲಿಯಿಂದ ನೊಣವಿನಕೆರೆ ಹಿನ್ನೀರಿನ ಪ್ರದೇಶದವರೆಗೂ ನೀರು ಸಿಗುವಂತಾಗಿದೆ. ಅಷ್ಟೇ ಅಲ್ಲದೇ ನೀರಿಲ್ಲದೆ ಬತ್ತಿ ಹೋಗಿದ್ದ ಸಾವಿರಾರು ಕೊಳವೆ ಬಾವಿಗಳಿಗೆ ಮರು ಜೀವ ಬಂದಿವೆ. ಎಲ್ಲರೂ ಖುಷಿಯಿಂದ ತಮ್ಮ ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ.

ಅಂದು ಸಾಹಿತಿ ಎಂದು ಗೌರವ ಕೊಡುತ್ತಿದ್ದ ಈ ಭಾಗದ ಜನರು ಇಂದು ಎಸ್.ಎಲ್. ಭೈರಪ್ಪ ಅವರನ್ನು ದೇವರು ಎಂದು ಭಾವಿಸಿ ಅವರ ಪಾದಗಳಿಗೆ ನಮಸ್ಕರಿಸುತ್ತಿದ್ದಾರೆ. ಈ ಎರಡು ದಿನಗಳಲ್ಲಿ ಹೋದ ಹಳ್ಳಿಗಳಲೆಲ್ಲಾ ಊರಿಗೆ ಊರೇ ಭೈರಪ್ಪನವರ ಕಾಲಿಗೆ ಎರಗಿ ಸಂತೋಷದ ಕಣ್ಣೀರು ಹಾಕುತ್ತಿದ್ದಾರೆ. ಬರಡಾಗಿದ್ದ ನಾಡಿಗೆ ಹಸಿರು ಚಿಗುರೆಲೆ ಮೂಡಿಸುವಂತೆ ಮಾಡಿದ ಭೈರಪ್ಪನನ್ನು ಸಂತನಂತೆ ಪೂಜಿಸುತ್ತಿದ್ದಾರೆ ಎಂದು ಸ್ಮರಿಸುತ್ತಾರೆ ಯೋಜನೆ ಸಾಕಾರಗೊಳ್ಳುವಂತೆ ಪರೋಕ್ಷವಾಗಿ ಓಡಾಡಿದ್ದ ಅದೇ ಸೋದರ ಸಂಬಂಧ ಕೃಷ್ಣ ಪ್ರಸಾದ್ ಅವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net