

| ರಮೇಶ್ ಮೈಸೂರು ಬೆಂಗಳೂರು
ಕನ್ನಡಿಗರ ದಶಕಗಳ ಕೂಗಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗ (ಎಸ್ಎಸ್ಸಿ) ಈ ಬಾರಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳ ನೇಮಕಾತಿಗೆ ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಜತೆಗೆ, ದೇಶದ ಎಲ್ಲ ಪ್ರಾದೇಶಿಕ ಭಾಷಾ ಅಭ್ಯರ್ಥಿಗಳಿಗೂ ಅನುಕೂಲ ಕಲ್ಪಿಸಿದೆ. ಕನ್ನಡ ಸೇರಿ 13 ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದು ಎಂದು ಈ ಸಲದ ಅಧಿಸೂಚನೆಯಲ್ಲಿ ಘೋಷಿಸಿದೆ. ಅಂತೆಯೇ, ಈ ಬಾರಿ 11 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಎಂಟಿಎಸ್ ಹುದ್ದೆಗಳು ಎಸ್ಎಸ್ಎಲ್ಸಿ ಅಥವಾ 10ನೇ ತರಗತಿ ವಿದ್ಯಾರ್ಹತೆ ಆಧಾರಿತವಾಗಿವೆ. ಕಳೆದ ಬಾರಿ ಮಾ.24ರಂದು ಅಧಿಸೂಚನೆ ಹೊರಡಿಸಿದ್ದಾಗಲೂ ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಮಾತ್ರ ಪರೀಕ್ಷೆ ಬರೆಯಬಹುದು ಎಂದು ಎಸ್ಎಸ್ಸಿ ತಿಳಿಸಿತ್ತು. ಕನ್ನಡಿಗರಿಗೆ ಉಂಟಾಗುತ್ತಿದ್ದ ಅನ್ಯಾಯದ ಬಗ್ಗೆ, ರಾಜ್ಯದ ಹುದ್ದೆಗಳು ಪರರ ಪಾಲಾಗುತ್ತಿರುವ ಬಗ್ಗೆ ‘ಕನ್ನಡಿಗರಿಗೆ ಎಂಟಿಎಸ್ ಅನ್ಯಾಯ’ ಶೀರ್ಷಿಕೆಯಲ್ಲಿ ವಿಜಯವಾಣಿ ಸರಣಿ ವರದಿಗಳನ್ನು ಪ್ರಕಟಿಸಿತ್ತು.
ರಾಜ್ಯವನ್ನು ಪ್ರತಿನಿಧಿಸಿರುವ ಕೇಂದ್ರ ಸಚಿವರ ಗಮನವನ್ನೂ ಸೆಳೆದಿತ್ತು. ಅಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ, ಈ ಬಾರಿ ಅಧಿಸೂಚನೆ ಹೊರಡಿಸಿರುವ ಎಸ್ಎಸ್ಸಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನೂ ಪ್ರಾದೇಶಿಕ ಭಾಷೆಗಳಲ್ಲೂ ನಡೆಸುವುದಾಗಿ ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ. ಕನ್ನಡಿಗರ ಹೋರಾಟದಿಂದ ಉಳಿದ ಪ್ರಾದೇಶಿಕ ಭಾಷಾ ಅಭ್ಯರ್ಥಿಗಳು ಲಾಭ ಪಡೆದಂತಾಗಿದೆ.
ಯಾವ ಭಾಷೆಯಲ್ಲಿ ಬರೆಯಬಹುದು?
ಈ ಮೊದಲು ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿತ್ತು. ಕನ್ನಡದಲ್ಲಿ ಟಿಪ್ಪಣಿಯೊಂದನ್ನು (ಪತ್ರ ಲೇಖನ) ಬರೆಯುವ ಅವಕಾಶವಿತ್ತು. ಆದರೆ, ಇದು ಅರ್ಹತಾದಾಯಕ ಪತ್ರಿಕೆಯಾಗಿದ್ದು, ಇದರ ಅಂಕಗಳನ್ನು ನೇಮಕಕ್ಕೆ ಪರಿಗಣಿಸುತ್ತಿರಲಿಲ್ಲ. ಈಗ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನೇ ಕನ್ನಡದಲ್ಲಿ ಬರೆಯಬಹುದಾಗಿದೆ. ಇದರೊಂದಿಗೆ, ಅಸ್ಸಾಮಿ, ಬೆಂಗಾಳಿ, ಗುಜರಾತಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು ಭಾಷೆಗಳನ್ನು ಪರೀಕ್ಷೆಗೆ ಪರಿಗಣಿಸಲಾಗಿದೆ.
ಮೀಸಲಾತಿಯೂ ಸಿಗಲಿ
ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ ನೀಡುವಂತೆ ಕನ್ನಡ ಸಾಹಿತ್ಯ ಪರಿಷತ್ ಕಳೆದ ಬಾರಿ ಎಸ್ಎಸ್ಸಿಗೆ ಕಾನೂನು ನೋಟಿಸ್ ನೀಡಿತ್ತು. ರಾಜ್ಯದ ಕೇಂದ್ರ ಸಚಿವರಿಗೂ ಪತ್ರ ಬರೆದಿತ್ತು. ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆಗೆ ಅವಕಾಶ ನೀಡುವುದಾಗಿ ಹೇಳಿದ್ದ ಎಸ್ಎಸ್ಸಿ ಅದರಂತೆ ನಡೆದಿದೆ. ಇದು ಸಂತೋಷದ ಸಂಗತಿ ಎಂದು ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಹೇಳಿದ್ದಾರೆ. ಎಂಟಿಎಸ್ ಸಿಬ್ಬಂದಿಗೆ ಸ್ಥಳೀಯ ಭಾಷೆ, ಸಂಸ್ಕೃತಿ ಅರಿವೂ ಇರಬೇಕು. ಈ ಕಾರಣಕ್ಕೆ ರಾಜ್ಯದ ಹುದ್ದೆಗಳು ಕನ್ನಡಿಗರಿಗೆ ಮೀಸಲಾಗಿರಬೇಕು. ರಾಜ್ಯ ಸರ್ಕಾರದ ಉದ್ದೇಶಿತ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕದಲ್ಲಿ ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲು ವಿಚಾರವೂ ಸೇರಿದೆ. ಇದನ್ನು ಆದಷ್ಟು ಬೇಗ ಅನುಷ್ಠಾನಗೊಳಿಸಬೇಕಿದೆ ಎಂದು ಜೋಶಿ ಒತ್ತಾಯಿಸಿದ್ದಾರೆ.
ಎಸ್ಎಸ್ಸಿಯಿಂದ ಅರ್ಜಿ ಆಹ್ವಾನ
ಕೇಂದ್ರ ಸರ್ಕಾರದ ವಿವಿಧ ಇಲಾಖೆ/ಸಚಿವಾಲಯ/ಕಚೇರಿಗಳಲ್ಲಿ ಕಾರ್ಯನಿರ್ವಹಿಸಲು ಮಲ್ಟಿ ಟಾಸ್ಕಿಂಗ್ ಸ್ಟಾಪ್ (ನಾನ್-ಟೆಕ್ನಿಕಲ್) ಹಾಗೂ ಹವಾಲ್ದಾರ್ ಹುದ್ದೆಗಳ ನೇಮಕಾತಿಗೆ ಎಸ್ಎಸ್ಸಿ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಎಂಟಿಎಸ್- 10,880 ಹಾಗೂ ಹವಾಲ್ದಾರ್- 529 ಹುದ್ದೆ ಸೇರಿ ಒಟ್ಟು 11,409 ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿದ್ದು, ಕನಿಷ್ಠ 18 ಹಾಗೂ ಗರಿಷ್ಠ 27 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಮೀಸಲಾತಿಯನ್ವಯ ವಯೋ ಸಡಿಲಿಕೆ ಇರಲಿದೆ. ಅರ್ಜಿ ಸಲ್ಲಿಸಲು ಫೆ.17 ಕೊನೆಯ ದಿನವಾಗಿದೆ. ವಿವರಗಳಿಗೆ https://ssc.nic.in/ ಸಂಪರ್ಕಿಸಿ.
ರಾಜ್ಯಕ್ಕೇನು ಲಾಭ?
ಎಸ್ಎಸ್ಸಿಯಿಂದ ನಡೆಸುವ ಎಲ್ಲ ಪರೀಕ್ಷೆಗಳು ರಾಷ್ಟ್ರಮಟ್ಟದ ಪರೀಕ್ಷೆಯಾಗಿವೆ. ಹಿಂದಿಯಲ್ಲಿ ಪರೀಕ್ಷೆ ನಡೆಸುತ್ತಿದ್ದರಿಂದ ಹಿಂದಿ ಭಾಷಿಕರು ಸುಲಭವಾಗಿ ಈ ಹುದ್ದೆಗಳಿಗೆ ಆಯ್ಕೆಯಾಗುತ್ತಿದ್ದರು. ರಾಜ್ಯದ ಹುದ್ದೆಗಳಿಗೆ ಸ್ಥಳೀಯರಿಗೆ ಮೀಸಲಾತಿ ಇಲ್ಲದಿರುವುದರಿಂದ ಹೆಚ್ಚಿನ ಅಂಕ ಪಡೆದವರು ತಮಗಿಷ್ಟವಾದ ರಾಜ್ಯಗಳನ್ನು ಆಯ್ದುಕೊಂಡು ಎಲ್ಲೆಡೆ ಆಕ್ರಮಿಸಿಕೊಳ್ಳುತ್ತಿದ್ದರು. ಎಸ್ಎಸ್ಎಲ್ಸಿ ವಿದ್ಯಾರ್ಹತೆಯ ಹುದ್ದೆಗಳಾಗಿರುವುದರಿಂದ ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಬರೆಯಲು ಅಸಮರ್ಥರಾಗುತ್ತಿದ್ದ ರಾಜ್ಯದ ಅಭ್ಯರ್ಥಿಗಳು ಕೇಂದ್ರ ಸರ್ಕಾರದ ಹುದ್ದೆಗಳಿಂದ ಸದಾ ವಂಚಿತರಾಗುತ್ತಿದ್ದರು. ಇದೀಗ ಕನ್ನಡದಲ್ಲೂ ಬರೆಯಬಹುದಾಗಿರುವುದರಿಂದ ಪರೀಕ್ಷೆಯನ್ನು ಸುಲಭವಾಗಿ ಬರೆಯಬಹುದಾಗಿದೆ.