ಧರ್ಮದ ಕಾಲಂನಲ್ಲಿ ಲಿಂಗಾಯತ ಬರೆಯಿಸಿ

h23-lingayat 1
Published on

ಹುಬ್ಬಳ್ಳಿ: ಮುಂಬರುವ ಜಾತಿ ಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ, ಉಪ ಜಾತಿಯಲ್ಲಿ ಒಳಪಂಗಡ ಬರೆಯಿಸಬೇಕು ಎಂದು ಸಾಣೇಹಳ್ಳಿಯ ತರಳಬಾಳು ಮಠದ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕರೆಕೊಟ್ಟರು.

ಇಲ್ಲಿಯ ಲಿಂಗರಾಜನಗರದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಲಿಂಗಾಯತ ಅಲ್ಪಸಂಖ್ಯಾತರ ಮಾನ್ಯತೆಗಾಗಿ ಹೋರಾಟ ವೇದಿಕೆಯನ್ನು ಉದ್ಘಾಟಿಸಿ ಶ್ರೀಗಳು ಮಾತನಾಡಿದರು.

ಲಿಂಗಾಯತ ಧರ್ಮ ಸ್ಥಾಪನೆಯಾಗಿದ್ದೆ 12ನೇ ಶತಮಾನದಲ್ಲಿ. ಆದರೆ, ದಾಖಲಾತಿಯಲ್ಲಿನ ಸಮಸ್ಯೆಯಿಂದಾಗಿ ಅದು ಇನ್ನೂ ನನೆಗುದಿಗೆ ಬಿದ್ದಿದೆ. ಕಾನೂನು ಬದ್ಧಗೊಂಡು ಲಿಂಗಾಯತ ಸ್ವತಂತ್ರ ಧರ್ಮ ಆದಾಗ ಮಾತ್ರ ನಾವು ಎಲ್ಲ ಸವಲತ್ತು ಪಡೆದುಕೊಳ್ಳಬಹುದು. ಕಾರಣ ಧರ್ಮದ ಕಾಲಂನಲ್ಲಿ ಕಡ್ಡಾಯವಾಗಿ ಲಿಂಗಾಯತ ಎಂದಷ್ಟೇ ಬರೆಯಿಸಿ ಎಂದು ಹೇಳಿದರು.

ಹಿಂದು ಎಂಬುದೇ ಧರ್ಮವಲ್ಲ. ಸಮಾಜದಲ್ಲಿ ತಪ್ಪು ಕಲ್ಪನೆ ಬಿಂಬಿಸಲಾಗುತ್ತಿದೆ. ಅದಕ್ಕೆ ಕಿವಿಗೊಡಬೇಡಿ. ವಾಸ್ತವ ಸ್ಥಿತಿಯತ್ತ ಒತ್ತು ಕೊಡಬೇಕು. ಸೆಪ್ಟೆಂಬರ್ 1ರಿಂದ ಅಕ್ಟೋಬರ್ 5ರವರೆಗೆ ‘ಬಸವ ಸಂಸ್ಕೃತಿ ಅಭಿಯಾನ’ ಆಯೋಜಿಸಲಾಗಿದೆ. ಇದು ಬಸವನ ಬಾಗೇವಾಡಿಯಿಂದ ಆರಂಭವಾಗಿ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾರೋಪಗೊಳ್ಳಲಿದೆ. ಲಿಂಗಾಯತರು ಜಾಗೃತರಾಗಬೇಕು ಎಂದರು.

ಸಂಜಯಕುಮಾರ ಮಾಕಲ ಉಪನ್ಯಾಸ ನೀಡಿ, ಲಿಂಗಾಯತ ಧರ್ಮವೆಂಬುದು ಕಾನೂನಿನಲ್ಲಿದೆ. ವೀರಶೈವ-ಲಿಂಗಾಯತ ಬೇರೆ ಎಂದು ಹೇಳಿದರೆ, ಧರ್ಮ ಇಬ್ಭಾಗ ಮಾಡಿದಂತೆ. ನಾವು ಧರ್ಮ ಒಡೆಯಲು ಹೋಗಲಿಲ್ಲ, ಕಾನೂನಿನ ಪ್ರಕಾರ ಹೋಗೋಣ ಎಂದಷ್ಟೇ ಹೇಳಿದರೂ ಯಾರೂ ಕೇಳಲಿಲ್ಲ. ಈಗ ಕಾಲ ಮಿಂಚಿಲ್ಲ. ಜಾತಿ ಗಣತಿಯಲ್ಲಿ ಧರ್ಮ ಕಾಲಂನಲ್ಲಿ ಲಿಂಗಾಯತ ಸೇರಿಸಿ ನಮ್ಮ ಮುಂದಿನ ಜನಾಂಗವನ್ನು ಸ್ವಾಭಿಮಾನಿಗಳನ್ನಾಗಿಸೋಣ ಎಂದರು.

ಮನಗೂಳಿಯ ಶ್ರೀ ವಿರತೀಶಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಕೀಲ ವಿಜಯಕುಮಾರ ಶೀಲವಂತರ ಅಭಿಪ್ರಾಯ ಮಂಡಿಸಿ ಅಧ್ಯಕ್ಷರಿಂದ ಒಪ್ಪಿಗೆ ಪಡೆದರು. ಹೋರಾಟಕ್ಕೆ ಸಭೆಯಲ್ಲಿ ಠರಾವ್ ಪಾಸ್ ಮಾಡಲಾಯಿತು. ಸಂಘಟಕ ಚಿಂತಾಮಣಿ ಸಿಂಧಗಿ ಅಧ್ಯಕ್ಷತೆ ವಹಿಸಿದ್ದರು.

ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಪ್ರಮುಖರಾದ ತಾರಾದೇವಿ ವಾಲಿ, ಮಲ್ಲಿಕಾರ್ಜುನ ಬಾಣದ, ಡಾ. ಚನ್ನಪ್ಪ ಝುಳಕಿ, ಡಾ.ವಾಸು ಎಸ್.ವಿ., ಡಾ. ಮೋಹನ ನುಚ್ಚಿ, ಶಿವಣ್ಣ ಅಂಗಡಿ, ಮಲ್ಲಿಕಾರ್ಜುನ ಕುಂಬಾರ, ಪಂಚಲಿಂಗಪ್ಪ ಕೋದಾನಪುರ, ಸುರೇಶ ಬಣವಿ, ಬಸಯ್ಯ ಮಠಪತಿ, ರವಿ ಕುಡುವಕ್ಕಲಿಗ, ಸಿದ್ದಪ್ಪ ಮಾಯಣ್ಣವರ, ಶಿವನಗೌಡ ಪಾಟೀಲ, ಗೀತಾ ಮರಿಲಿಂಗಣ್ಣವರ, ಡಾ. ಶಿವಯೋಗಪ್ಪ ಯಮ್ಮಿ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net