

ಕೂಡ್ಲಿಗಿ: ಅಂಕಗಳ ಜತೆಗೆ ಜ್ಞಾನವೂ ಮುಖ್ಯವಾಗಿದೆ ಕನ್ನಡ ಉಪನ್ಯಾಸಕ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಅಧ್ಯಕ್ಷ ರಾಜೇಂದ್ರ ವರ್ಮ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕರ ಮೆಟ್ರಿಕ್ ಪೂರ್ವ ಹಾಸ್ಟೆಲ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಸಿದ್ಧಪಡಿಸಿದ ಸಹಾಯಕ ಕೈಪಿಡಿ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.
ಹೆಚ್ಚು ಹೆಚ್ಚು ಬರೆಯುವ ಅಭ್ಯಾಸ ಮಾಡುಕೊಳ್ಳುವುದರಿಂದ ಉತ್ತರಗಳನ್ನು ಮನನ ಮಾಡಿಕೊಂಡು, ಅಕ್ಷರಗಳನ್ನು ತಪ್ಪಿಲ್ಲದಂತೆ ದುಂಡಾಗಿ ಬರೆಯಲು ಸಾಧ್ಯವಾಗುತ್ತದೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಈ ಪುಸ್ತಕ ಉಪಯುಕ್ತವಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತಾಲೂಕು ಸಂಚಾಲಕ ಬಿ.ಬಿ.ಜಿ. ಗೌತಮ್ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಶಿಕ್ಷಕರಾದ ರಾಜು, ಎಂ.ವಾಹಿದ್ ಬಾಷಾ, ಎನ್, ಮಂಜುನಾಥ ಎಂ.ಎಸ್ ಅವರು ಇಂಗ್ಲೀಷ್, ವಿಜ್ಞಾನ, ಗಣಿತದ ಸಹಾಯಕ ಕೈಪಿಡಿ ಸಿದ್ಧಗೊಳಿಸಿದ್ದಾರೆ. ತಾಲೂಕಿನ ಎಲ್ಲ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಈ ಪುಸ್ತಕವನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.