ಖಾಸಗಿ ನರ್ಸಿಂಗ್ ಕಾಲೇಜುಗಳಲ್ಲಿ ಅನ್ಯಾಯವಿರುದ್ದ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ

High court logo+1
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ನರ್ಸಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಮೆರಿಟ್ ಆಧಾರದಲ್ಲಿ ಸೀಟು ಪಡೆಯುವ ಅರ್ಹತೆ ಪಡೆದ ವಿದ್ಯಾರ್ಥಿಗಳಿಂದ ಕಾಲೇಜಿನ ಆಡಳಿತ ಮಂಡಳಿಯವರು  ಸರ್ಕಾರ ನಿಗದಿಪಡಿಸಿದ ಮೊತ್ತಕ್ಕಿಂತ ಅಧಿಕ ಶುಲ್ಕ ಬೇಡಿಕೆ ಮುಂದಿಟ್ಟು ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಹಾಕಲು ಸಿದ್ಧತೆ ನಡೆದಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬಿ.ಸುರೇಶ್ ಭಟ್ ಕೊಜಂಬೆ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ 9 ಬಿಎಸ್‌ಸಿ ನರ್ಸಿಂಗ್ ಕಾಲೇಜುಗಳಿಗೆ ವರ್ಷಂಪ್ರತಿ ಸರ್ಕಾರ ಕರ್ನಾಟಕ ಪರಿಕ್ಷಾ ಮಂಡಳಿ (ಕೆಇಎ) ಮೂಲಕ ಪರೀಕ್ಷೆ ನಡೆಸಿ 80:20 (ಮ್ಯಾನೇಜ್ಮೆಂಟ್ 80 ಶೇ. ಮತ್ತು ಸರ್ಕಾರಿ ಕೋಟಾ ಶೇ.20 ) ಅನುಪಾತದಲ್ಲಿ ಲಭ್ಯವಿರುವ ಸೀಟುಗಳನ್ನು ಕೌನ್ಸೆಲಿಂಗ್ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸರ್ಕಾರಿ ಕೋಟಾದಲ್ಲಿ ಲಭ್ಯವಿರುವ ಸೀಟುಗಳಿಗೆ ಸರ್ಕಾರವೇ ಶುಲ್ಕ ನಿಗದಿಪಡಿಸಿರುತ್ತದೆ. ಆದರೆ ಖಾಸಗಿ ಕಾಲೇಜುಗಳ ಆಡಳಿತ ವ್ಯವಸ್ಥೆಯು ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಅಧಿಕ ಶುಲ್ಕಕ್ಕೆ ವಿದ್ಯಾರ್ಥಿಗಳಲ್ಲಿ ಪೀಡಿಸುತ್ತಿದೆ. ಅಧಿಕ ಶುಲ್ಕ ಒದಗಿಸದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಕಡಬದ ಸುಮಾರು 36 ಹಳ್ಳಿಗಳಿಗೆ ಇನ್ನೂ ಕೂಡ ಸರಿಯಾದ ಸಾರಿಗೆ (ಬಸ್) ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದಿರುವುದು ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದವರು ಇದೇ ವೇಳೆ ದೂರಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪರವಾಗಿ ಜೇಕಬ್, ಮಿತೇಶ್ ಮೂಡುಕೊಣಾಜೆ, ಪ್ರಕಾಶ್, ಇಸ್ಮಾಯಿಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net