ರೈತರ ಬೇಡಿಕೆಗೆ ಸರ್ಕಾರ ಸ್ಪಂದನೆ

Prakash Ghale
Published on

ಬೀದರ್: ಕಬ್ಬಿಗೆ ಯೋಗ್ಯ ಬೆಲೆ ನಿಗದಿ ಹಾಗೂ ಅತಿವೃಷ್ಟಿ ಸಂತ್ರಸ್ತರಿಗೆ ಸಕಾಲಕ್ಕೆ ಪರಿಹಾರ ಕಲ್ಪಿಸುವ ಮೂಲಕ ರಾಜ್ಯ ಸರ್ಕಾರ ರೈತರ ಬೇಡಿಕೆಗೆ ಸ್ಪಂದಿಸಿದೆ ಎಂದು ಜಿಲ್ಲೆಯವರೇ ಆದ ಕಾಂಗ್ರೆಸ್ ಕಿಸಾನ್ ವಿಭಾಗದ ರಾಷ್ಟ್ರೀಯ ಸಂಯೋಜಕ ಪ್ರಕಾಶ ಘಾಳೆ ಹೇಳಿದ್ದಾರೆ.

ಪ್ರತಿ ಟನ್ ಕಬ್ಬಿಗೆ ಸರ್ಕಾರದ ರೂ. 50 ಪ್ರೋತ್ಸಾಹ ಧನ ಹಾಗೂ ಕಾರ್ಖಾನೆಯ ಹೆಚ್ಚುವರಿ ರೂ. 50 ಸೇರಿದಂತೆ ಸರ್ಕಾರ ರೂ. 3,400 ಬೆಲೆ ನಿಗದಿಪಡಿಸಿದೆ ಎಂದು ತಿಳಿಸಿದ್ದಾರೆ.

ನೆರೆಯ ರಾಜ್ಯ ಮಹಾರಾಷ್ಟ್ರಕ್ಕೆ ಹೋಲಿಸಿದರೆ ಈ ಬೆಲೆ ಪ್ರತಿ ಟನ್‍ಗೆ ರೂ. 400 ರಿಂದ ರೂ. 600 ಅಧಿಕವಾಗಿದೆ. ಕಾಂಗ್ರೆಸ್ ರೈತರ ಹಿತ ರಕ್ಷಣೆ ಮಾಡುತ್ತಿದ್ದರೆ, ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ರೈತರ ಮೇಲೆ ಅನ್ಯಾಯ ಆಗುತ್ತಲೇ ಇದೆ ಎಂದು ದೂರಿದ್ದಾರೆ.

ಕಬ್ಬು ಬೆಲೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನುಡಿದಂತೆ ನಡೆದುಕೊಂಡಿದ್ದಾರೆ. ರೈತ ಪರ ಕಾಳಜಿ ತೋರಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಅತಿವೃಷ್ಟಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬೀದರ್ ಜಿಲ್ಲೆಯ ರೈತರ ನೆರವಿಗೂ ರಾಜ್ಯ ಸರ್ಕಾರ ಸರಿಯಾದ ಸಮಯಕ್ಕೆ ಧಾವಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ವಿಶೇಷ ಮುತುವರ್ಜಿ ವಹಿಸಿ ಬೆಳೆ ಹಾನಿಗೊಳಗಾದ ರೈತರು, ಮನೆ ಕಳೆದುಕೊಂಡ ಸಂತ್ರಸ್ತರ ಖಾತೆಗೆ ಶೀಘ್ರದಲ್ಲೇ ರೂ. 300 ಕೋಟಿ ಪರಿಹಾರ ಜಮೆ ಮಾಡಿಸಿದ್ದಾರೆ. ಜನ ಪರ ಕಾರ್ಯದಿಂದ ಜಿಲ್ಲೆಯ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net