ಕರ್ನಾಟಕ ಸರ್ಕಾರ ‘ಕನ್ನಡ ಸರ್ಕಾರ’ ಆಗಲಿ

karave sir
Published on

ಬೀದರ್: ಕರ್ನಾಟಕ ಸರ್ಕಾರ ‘ಕನ್ನಡ ಸರ್ಕಾರ’ ಆಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣಗೌಡ ಒತ್ತಾಸೆ ವ್ಯಕ್ತಪಡಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ದೀಕ್ಷೆ ಪ್ರತಿಜ್ಞೆ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಕ್ಕಾಗಿ ಎತ್ತುವ ಕೈಗಳಿಗೆ ಯಾವ ಕಾರಣಕ್ಕೂ ಕೊಳ ಹಾಕಬಾರದು ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿ ಕನ್ನಡ ನೆಲ, ಜಲ ಉಳಿದಿದ್ದರೆ, ಕನ್ನಡ ಉಸಿರಾಡುತ್ತಿದ್ದರೆ ಅದು ಕನ್ನಡ ಪರ ಹೋರಾಟಗಾರರಿಂದಲೇ ಹೊರತು ಸರ್ಕಾರದಿಂದಲ್ಲ ಎಂದು ತಿಳಿಸಿದರು.

ಕನ್ನಡ ಹೋರಾಟಗಾರರು ಯಾವುದೇ ಕೊಲೆ, ಸುಲಿಗೆ ಮಾಡಿದವರಲ್ಲ. ಆದರೂ, ಅವರ ಮೇಲೆ ನೂರಾರು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುವ ಮೊದಲು, ಆದ ನಂತರವೂ ಕನ್ನಡ ಹೋರಾಟಗಾರ ಮೇಲಿನ ಪ್ರಕರಣ ಹಿಂಪಡೆಯುವುದಾಗಿ ಅನೇಕ ಬಾರಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಅದನ್ನು ಈಡೇರಿಸಿಲ್ಲ. ಮತ್ತಷ್ಟು ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ನಾಮಫಲಕಗಳಲ್ಲಿ ಶೇ ೬೦ ರಷ್ಟು ಭಾಗದಲ್ಲಿ ಕನ್ನಡ ಬಳಸಬೇಕೆಂಬ ಕಾಯ್ದೆ ರಚನೆಯಾಗಲು ಕಾರಣವಾದದ್ದು ವೇದಿಕೆ ವಿನಃ ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಸರ್ಕಾರಗಳು ಅಲ್ಲ. ಇದಕ್ಕಾಗಿ ನಡೆಸಿದ ಹೋರಾಟದ ಕಾರಣ ನಾನು ೧೬ ದಿನ ಜೈಲು ವಾಸ ಅನುಭವಿಸಿದೆ ಎಂದು ಸ್ಮರಿಸಿದರು.

ರಾಷ್ಟçಭಾಷೆ ಅಲ್ಲದ ಹಿಂದಿಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ. ಅದರಿಂದ ಕನ್ನಡಿಗರಿಗೆ ಏನೂ ಉಪಯೋಗ ಇಲ್ಲ. ಕನ್ನಡ-ಇಂಗ್ಲಿಷ್ ಅಷ್ಟೇ ಸಾಕು ಎಂದು ಹೇಳಿದರು.

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲು ಕಲ್ಪಿಸುವ ಡಾ. ಸರೋಜಿನಿ ಮಹಿಷಿ ವರದಿ ಇನ್ನೂ ಜಾರಿಯಾಗಿಲ್ಲ. ವೇದಿಕೆ ಹೋರಾಟದ ಪರಿಣಾಮ ವರದಿ ಜಾರಿಗೆ ಮುಂದಾಗಿದ್ದ ಸರ್ಕಾರ ಕೆಲ ಐಟಿ ಕಂಪನಿಗಳ ವಿರೋಧದಿಂದ ಹಿಂದಡಿ ಇಟ್ಟಿತ್ತು ಎಂದು ಅಸಮಾಧಾನ ಹೊರ ಹಾಕಿದರು.

ಕರ್ನಾಟಕದಲ್ಲಿ ಕನ್ನಡವೇ ಸಂಭ್ರಮಿಸಬೇಕು. ಬೇರೆ ಭಾಷೆಗಳು ಮೆರೆಯಲು ಅವಕಾಶ ಇಲ್ಲ. ಕನ್ನಡಿಗರು ಪ್ರೀತಿಗೆ ಪ್ರೀತಿ, ನೀರು ಕೇಳಿದರೆ ಅಮೃತ ಕೊಡುವವರು. ಕೆಣಕಿದರೆ ತಕ್ಕ ಉತ್ತರ ಕೊಡುವವರೂ ಆಗಿದ್ದಾರೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಮುಖ್ಯಮಂತ್ರಿ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ. ಕಾನೂನು ತೊಡಕುಗಳಿಂದ ಕನ್ನಡ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಲು ವಿಳಂಬ ಆಗಿದೆ. ರಾಜ್ಯ ಸರ್ಕಾರ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದು ನಿಶ್ಚಿತ ಎಂದರು.

ಕರ್ನಾಟಕದ ನೆಲ, ಜಲ, ಭಾಷೆ ಹಾಗೂ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ, ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಮಾತನಾಡಿದರು.

ಏಕತಾ ಫೌಂಡೇಷನ್ ಅಧ್ಯಕ್ಷ ರವೀಂದ್ರ ಸ್ವಾಮಿ, ವೇದಿಕೆಯ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಪ್ರಧಾನ ಸಂಚಾಲಕ ಸಚಿನ್ ಗಾಣಗೇರ್, ರಾಜ್ಯ ಘಟಕದ ವೀರಭದ್ರಪ್ಪ, ವಿನೋದ್, ಸಹನಾ ಶೇಖರ್, ಜಿಲ್ಲಾ ಘಟಕದ ಗೌರವಾಧ್ಯಕ್ಷ ಖಾದರ್ ಪಾಷಾ, ಉಪಾಧ್ಯಕ್ಷ ಸೋಮಶೇಖರ ಸಜ್ಜನ್, ಸಂಘಟನಾ ಕಾರ್ಯದರ್ಶಿ ವಿನಾಯಕ ರೆಡ್ಡಿ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ವೀರಶೆಟ್ಟಿ ಗೌಸಪುರ, ಔರಾದ್ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಹೇಡೆ, ಕಮಲನಗರ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಸ್ವಾಮಿ, ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಬಂಡೆಪ್ಪ ಕರಸಣ್ಣ, ಹುಮನಾಬಾದ್ ತಾಲ್ಲೂಕು ಘಟಕದ ಅಧ್ಯಕ್ಷ ವೀರೇಶ ರೆಡ್ಡಿ ಬೋತಗಿಕರ್, ಬಸವಕಲ್ಯಾಣ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ ಸತಾಣೆ, ಪ್ರಮುಖರಾದ ಮಲ್ಲಿಕಾರ್ಜುನ ಸಿಕೇನಪುರೆ, ಶಿವರುದ್ರ ತೀರ್ಥ, ಮಹೇಶ ಕಾಪಸೆ, ತುಕಾರಾಮ ಜೈರಾಮ ಮತ್ತಿತರರು ಇದ್ದರು.

ವೇದಿಕೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಗೌಡ ಸ್ವಾಗತಿಸಿದರು. ವೇದಿಕೆ ಕಾರ್ಯಕರ್ತರು ಹಾಗೂ ಕನ್ನಡಿಗರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

೨೦ರ ನಂತರ ಅನ್ಯ ಭಾಷೆ ನಾಮಫಲಕ ಪುಡಿ

ಬೀದರ್: ನವೆಂಬರ್ ೨೦ ರ ನಂತರ ಜಿಲ್ಲೆಯಲ್ಲಿ ನಿಯಮಾನುಸಾರ ಶೇ ೬೦ ರಷ್ಟು ಭಾಗದಲ್ಲಿ ಕನ್ನಡ ಬಳಸದ ಅನ್ಯ ಭಾಷೆ ನಾಮಫಲಕಗಳನ್ನು ಪುಡಿಗೊಳಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಎಚ್ಚರಿಕೆ ನೀಡಿದರು. ಕನ್ನಡ ದೀಕ್ಷೆ ಪ್ರತಿಜ್ಞೆ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ವೇದಿಕೆಯ ಕಾರ್ಯಕರ್ತರು ಇದನ್ನು ನಿರ್ಧರಿಸಿಯಾಗಿದೆ. ಎಷ್ಟೇ ಪ್ರಕರಣ ದಾಖಲಿಸಿದರೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು. ಜಿಲ್ಲೆಯಲ್ಲಿ ನಾಮಫಲಕ ವಿಷಯದಲ್ಲಿ ಆಡಳಿತ ನಿಷ್ಕಾಳಜಿ ತೋರುತ್ತಿದೆ. ವೇದಿಕೆ ಕನ್ನಡ ರಕ್ಷಣೆಗೆ ಹೋರಾಟ ನಡೆಸಲಿದೆ ಎಂದರು. ಕನ್ನಡ ನಾಮಫಲಕಕ್ಕಾಗಿ ಟಿ.ಎ. ನಾರಾಯಣಗೌಡರು ಸೆರೆವಾಸ ಅನುಭವಿಸಿದ್ದನ್ನು ಕನ್ನಡಿಗರು ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು. ಮುಂದಿನ ವರ್ಷದ ನವೆಂಬರ್ ಒಳಗೆ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ವೇದಿಕೆಯ ಗ್ರಾಮ ಘಟಕ ರಚಿಸಿ, ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಬೀದರ್‌ನಲ್ಲಿ ಗಡಿ ಕನ್ನಡಿಗರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಕನ್ನಡ ದೀಕ್ಷೆ ಪಡೆದ ಜಿಲ್ಲೆಯ ಯುವಕರು

ಬೀದರ್: ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ರಂಗ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲೆಯ ಯುವಕರು ಅಪಾರ ಸಂಖ್ಯೆಯಲ್ಲಿ ಕನ್ನಡ ದೀಕ್ಷೆ ಪಡೆದರು. ವೇದಿಕೆಯ ರಾಜ್ಯ ಅಧ್ಯಕ್ಷ ಟಿ.ಎ. ನಾರಾಯಣಗೌಡರು ಪ್ರತಿಜ್ಞೆ ವಿಧಿ ಬೋಧಿಸಿದರು. ಕನ್ನಡ ತಾಯಿ ಭುವನೇಶ್ವರಿಗೆ ಜಯವಾಗಲಿ ಎಂಬ ಘೋಷಣೆ ಮೊಳಗಿದವು.

ಕ.ರ.ವೇ ಹೋರಾಟದ ಕಿರುಚಿತ್ರ ಪ್ರದರ್ಶನ

ಬೀದರ್: ಕನ್ನಡ ದೀಕ್ಷೆ ಪ್ರತಿಜ್ಞಾ ಸ್ವೀಕಾರ ಸಮಾರಂಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಹೋರಾಟಗಳ ಕಿರುಚಿತ್ರ ಪ್ರದರ್ಶಿಸಲಾಯಿತು. ಐದು ನಿಮಿಷದ ಕಿರುಚಿತ್ರ ವೇದಿಕೆಯು ಕನ್ನಡ ನಾಡು, ನುಡಿಗಾಗಿ ನಡೆಸಿದ ಹೋರಾಟಗಳ ಮೇಲೆ ಬೆಳಕು ಚೆಲ್ಲಿತು.

ಕರವೇ ಅಧ್ಯಕ್ಷರಿಗೆ ಹೃದಯಸ್ಪರ್ಶಿ ಸ್ವಾಗತ

ಬೀದರ್: ಕನ್ನಡ ದೀಕ್ಷೆ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶುಕ್ರವಾರ ಇಲ್ಲಿಗೆ ಬಂದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣಗೌಡರನ್ನು ವೇದಿಕೆಯ ಕಾರ್ಯಕರ್ತರು ಹೃದಯ ಸ್ಪರ್ಶಿಯಾಗಿ ಸ್ವಾಗತಿಸಿದರು. ಶಹಾಪುರ ಗೇಟ್ ಬಳಿ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ, ಗೌರವಾಧ್ಯಕ್ಷ ಖಾದರ್ ಪಾಶಾ, ಅನಿಲ್ ಹೇಡೆ, ವೀರಶೆಟ್ಟಿ ಗೌಸಪುರೆ, ಶಿವಕುಮಾರ ಭೈರನಳ್ಳಿಕರ್, ಮಂಜುನಾಥ ಸ್ವಾಮಿ, ಬಂಡೆಪ್ಪ ಕರಸಣ್ಣ, ಗಣೇಶ ಸತಾಣೆ ಮತ್ತಿತರರು ಶಾಲು ಹೊದಿಸಿ, ಪುಷ್ಪ ಗುಚ್ಛ ನೀಡಿ ಸ್ವಾಗತಿಸಿ, ಬರಮಾಡಿಕೊಂಡರು. ಅಲ್ಲಿAದ ಅವರನ್ನು ವಾಹನಗಳ ರ‍್ಯಾಲಿ ಮೂಲಕ ಶಾಹೀನ್ ವೃತ್ತ, ಗುಂಪಾ ರಿಂಗ್ ರಸ್ತೆ, ಬಿ.ವಿ. ಭೂಮರಡ್ಡಿ ಕಾಲೇಜು, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಅಂಬೇಡ್ಕರ್ ವೃತ್ತಕ್ಕೆ ಕರೆ ತರಲಾಯಿತು. ಅಂಬೇಡ್ಕರ್ ವೃತ್ತದಲ್ಲಿ ಎರಡು ಜೆಸಿಬಿಗಳಿಂದ ನಾರಾಯಣಗೌಡರ ಮೇಲೆ ಪುಷ್ಪ ವೃಷ್ಟಿ ಮಾಡಿದ್ದು ಎಲ್ಲರ ಗಮನ ಸೆಳೆಯಿತು.

ತೆರೆದ ವಾಹನದಲ್ಲಿ ನಾರಾಯಣಗೌಡ ಅದ್ಧೂರಿ ಮೆರವಣಿಗೆ

ಬೀದರ್: ನಗರದ ಅಂಬೇಡ್ಕರ್ ವೃತ್ತದಿಂದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದ ವರೆಗೆ ಅಲಂಕೃತ ತೆರೆದ ವಾಹನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷ ಟಿ.ಎ. ನಾರಾಯಣಗೌಡರ ಮೆರವಣಿಗೆ ನಡೆಯಿತು. ಮೆರವಣಿಗೆ ಮುಂಭಾಗದಲ್ಲಿ ಕನ್ನಡ ರಥ, ತೆರೆದ ವಾಹನದಲ್ಲಿ ನಾರಾಯಣಗೌಡ, ಸೋಮನಾಥ ಮುಧೋಳ, ಖಾದರ್ ಪಾಶ ಇದ್ದರು. ಕಾರ್ಯಕರ್ತರು ಕೈಯಲ್ಲಿ ಬೃಹತ್ ಕನ್ನಡ ಧ್ವಜಗಳನ್ನು ಹಿಡಿದು ಸಾಗಿದರು. ಕನ್ನಡ ತಾಯಿ ಭುವನೇಶ್ವರಿಗೆ ಜಯವಾಗಲಿ ಎಂಬ ಘೋಷಣೆ ಹಾಕಿದರು. ಡೊಳ್ಳು ಕುಣಿತ, ಮುಧೋಳದ ಕಾಶಿ ವಿಶ್ವನಾಥ ಮಹಿಳಾ ಕಲಾ ತಂಡ, ಕೋಲಾಟ, ಲಂಬಾಣಿ ನೃತ್ಯ ಮೆರವಣಿಗೆಗೆ ವಿಶೇಷ ಕಳೆ ನೀಡಿದವು. ಡಿಜೆದಲ್ಲಿ ಮೊಳಗಿದ ಕ.ರ.ವೇ. ರಾಜ್ಯ ಅಧ್ಯಕ್ಷ ಟಿ.ಎ. ನಾರಾಯಣಗೌಡರು ರಚಿಸಿದ ‘ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ...', 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು...', 'ಅವ್ವ ಕಣೋ ಕನ್ನಡ...' ಮೊದಲಾದ ಗೀತೆಗಳ ತಾಳಕ್ಕೆ ತಕ್ಕಂತೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಾಗೂ ಕನ್ನಡಾಭಿಮಾನಿಗಳು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಮೊಳಗಿದ ಕನ್ನಡ ಡಿಂಡಿಮ

ಬೀದರ್: ಕನ್ನಡ ದೀಕ್ಷೆ ಪ್ರತಿಜ್ಞಾ ಸ್ವೀಕಾರ ಸಮಾರಂಭ ನಿಮಿತ್ತ ಪರಂಪರೆ ನಗರ ಬೀದರ್‌ನಲ್ಲಿ ಕನ್ನಡ ಡಿಂಡಿಮ ಮೊಳಗಿತು.

ಪ್ರಮುಖ ವೃತ್ತಗಳು ಸೇರಿದಂತೆ ಎಲ್ಲೆಡೆ ಬೃಹತ್ ಕನ್ನಡ ಧ್ವಜಗಳು, ಕಟೌಟ್, ಬ್ಯಾನರ್ ಹಾಗೂ ಹೋರ್ಡಿಂಗ್ಸ್ಗಳು ರಾರಾಜಿಸಿದವು.

ಸಮಾರಂಭವು ಕನ್ನಡ ಹಬ್ಬದ ವಾತಾವರಣ ಸೃಷ್ಟಿಸಿತು. ಕನ್ನಡಿಗರಲ್ಲಿ ಹೆಮ್ಮೆ ಉಂಟು ಮಾಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net