ಟನ್ ಕಬ್ಬಿಗೆ 3500 ದರ ಸಿಗ್ಲೇಬೇಕು

Dr Shailendra Beldale - Copy
Published on

ಬೀದರ್: ಜಿಲ್ಲೆಯ ಸಹಕಾರ ಸಕ್ಕರೆ ಕಾರ್ಖಾನೆಗಳು ಸೇರಿ ಎಲ್ಲ ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಸಾಲಿನಲ್ಲಿ ರೈತರಿಗೆ ಪ್ರತಿ ಟನ್ ಕಬ್ಬಿಗೆ 3500 ರೂ. ದರ ನಿಗದಿಪಡಿಸಬೇಕು. ಈ ಸಂಬಂಧ ರೈತ ಸಂಘಟನೆ ಮಂಡಿಸಿದ ಬೇಡಿಕೆ ಹಾಗೂ ನಡೆಸುತ್ತಿರುವ ಹೋರಾಟ ನ್ಯಾಯಸಮ್ಮತವಾಗಿದೆ. ಇದಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ.

ಕಬ್ಬು ಬೆಲೆ ನಿಗದಿ ಸಂಬಂಧ ನಿನ್ನೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆ ವಿಫಲವಾಗಿದೆ. ರೈತರ ಕಣ್ಣೊರೆಸುವ ಕೆಲಸ ಆಡಳಿತ, ಸರ್ಕಾರದಿಂದ ಮಾಡುವುದು ಸರಿಯಲ್ಲ. ಈ ತರಹದ ಸಭೆ ನಡೆಸುವ ಬದಲು ಎಲ್ಲರಿಗೂ ಕರೆಯಿಸಿ ಸಭೆ ಮಾಡಿದರೆ ಅದಕ್ಕೆ ಅರ್ಥ ಬರುತ್ತಿತ್ತು ಎಂದು ಇಲ್ಲಿ ಹೊರಡಿಸಿರುವ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕಬ್ಬಿನ ಬೆಲೆ ನಿಗದಿ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸಂಪೂರ್ಣ ನಿರ್ಲಕ್ಷ್ಯ ತಾಳಿದ್ದಾರೆ. ರಾಜ್ಯದೆಲ್ಲೆಡೆ ಕಬ್ಬು ಬೆಳೆಗಾರರ ಹೋರಾಟ ಜೋರಾಗಿದೆ. ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿದೆ. ಬೀದರ್ ಜಿಲ್ಲೆಯಲ್ಲಿ ಸಹ ಇಂಥ ಪರಿಸ್ಥಿತಿ ಎದುರಾಗುವ ಸಾಧ್ಯತೆ ಕಂಡುಬರುತ್ತಿವೆ. ಆದರೂ ಜಿಲ್ಲಾ ಉಸ್ತುವಾರಿ ಸಚಿವರು ಕಬ್ಬು ಬೆಲೆ ನಿಗದಿ ಬಗ್ಗೆ ಮೌನ ವಹಿಸಿರುವುದು ಸರಿಯಲ್ಲ. ತಕ್ಷಣ ಸಚಿವರು ಡಿಸಿ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರ, ರೈತ ಸಂಘಟನೆಗಳ, ಎಲ್ಲ ಕಾರ್ಖಾನೆ ಅಧ್ಯಕ್ಷರ ತುರ್ತು ಸಭೆ ಕರೆಯಬೇಕು. ಕಬ್ಬು ಬೆಲೆ ನಿಗದಿಗೆ ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸದ್ಯ ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ದರ ಬಹಳ ಹೆಚ್ಚಾಗಿದೆ. ಕಬ್ಬಿನ ಇತರೆ ಸಹ ಉತ್ಪಾದನೆಗಳೂ ಕಾರ್ಖಾನೆಗಳಿಗೆ ಸಾಕಷ್ಟು ಆದಾಯ ಬರುತ್ತಿದೆ. ಹೀಗಾಗಿ ಪ್ರತಿ ಟನ್ ಕಬ್ಬಿಗೆ 3500 ರೂ.‌ಕೊಡುವುದು ಸೂಕ್ತ ಹಾಗೂ ನ್ಯಾಯಸಮ್ಮತವಾಗಲಿದೆ ಎಂದು ಬೆಲ್ದಾಳೆ ಹೇಳಿದ್ದಾರೆ.

ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಮುಂಗಾರಿನ ಪ್ರಮುಖ ಬೆಳೆಗಳು ನೀರುಪಾಲಾಗಿ ರೈತರು ಕಂಗಾಲಾಗಿದ್ದಾರೆ. ಈಗ ಇರುವ ಕಬ್ಬು ಮಾತ್ರ ರೈತರಿಗೆ ಆಸರೆಯಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಸುಮಾರು 50 ಸಾವಿರ ಎಕರೆಯಲ್ಲಿ ಕಬ್ಬು ಬೆಳೆ ಇದೆ. ಸುಮಾರು 15 ಲಕ್ಷ ಟನ್ ಗೂ ಅಧಿಕ ಕಬ್ಬು ಉತ್ಪನ್ನದ ನಿರೀಕ್ಷೆಯಿದೆ. ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಸರ್ಕಾರ ಮುಂದಾಗಬೇಕು. ಉಸ್ತುವಾರಿ ಸಚಿವರು ಈ ವಿಷಯ ಗಂಭೀರ ಪರಿಗಣಿಸಿ ತುರ್ತಾಗಿ ಸಭೆ ಕರೆಯಬೇಕು. ಕಷ್ಟದಲ್ಲಿರುವ ರೈತರ ನೆರವಿಗಾಗಿ ಬೇಡಿಕೆಯಂತೆ ದರ ನಿಗದಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲೆಯ ರೈತರ ಜೊತೆಗೆ ನಾವಿದ್ದೇವೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ವಿರುದ್ಧ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದು ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net