ಬಸವಣ್ಣನವರೇ ಇಷ್ಟಲಿಂಗದ ಜನಕ

Basavling Pattaddevaru
Published on

ಭಾಲ್ಕಿ: ಇತ್ತೀಚೆಗೆ ಬೊಳೇಗಾಂವ ಗ್ರಾಮದಲ್ಲಿ ನಡೆದಿದ್ದ ಧಡ್ಡೇಶ್ವರರ ಜಾತ್ರೋತ್ಸವದಲ್ಲಿ ಗೋರ್ಟಾ ಶ್ರೀ ರಾಜಶೇಖರ ಶಿವಾಚಾರ್ಯರು ಇಷ್ಟಲಿಂಗಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ ಎಂದು ಹೇಳಿಕೆ ನೀಡಿದ್ದು ಸತ್ಯಕ್ಕೆ ದೂರವಾದದ್ದು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದ್ದಾರೆ.

12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ದೇವಾಲಯ ಸಂಸ್ಕೃತಿಯನ್ನು ಬಹಿಷ್ಕರಿಸಿ ಇಷ್ಟಲಿಂಗವನ್ನು ಎಲ್ಲರ ಕರಸ್ಥಲಕ್ಕೆ ನೀಡಿದರು. ಅಂತಲೇ ಬಸವಣ್ಣನವರನ್ನು ಇಷ್ಟಲಿಂಗದ ಜನಕ ಎಂದು ಕರೆಯುತ್ತಾರೆ ಎಂದು ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ಸಂಸ್ಕೃತಿಯಲ್ಲಿ ಶಿವಲಿಂಗ ಆರಾಧನೆ ಪುರಾತನವಾದದ್ದು. ಪೌರಾಣಿಕ ಶಿವನ ಪ್ರತೀಕವಾಗಿ ಶಿವಾಲಯಗಳಲ್ಲಿ ಸ್ಥಾವರ ಲಿಂಗದ ಸ್ಥಾಪಿಸಿದ್ದರಿಂದ ಇದರ ಪೂಜೆ ಮಾಡುವ ಪರಂಪರೆ ನಡೆದು ಬಂದಿದೆ. ಪ್ರವಾಸದಲ್ಲಿ ಪೂಜೆಗಾಗಿ ಸ್ಥಾವರಲಿಂಗದ ಸಣ್ಣ ರೂಪವನ್ನು ಜತೆಗಿಟ್ಟುಕೊಂಡು ಪೂಜಿಸುವ ಪರಂಪರೆ ಇದೆ ಎಂದು ತಿಳಿಸಿದ್ದಾರೆ.

ಶಿವಾಲಯಗಳಲ್ಲಿ ಶೂದ್ರರು, ಅಸ್ಪೃಶ್ಯರು, ಮಹಿಳೆಯರಿಗೆ ಅವಕಾಶ ಇರಲಿಲ್ಲ. ಅದಕ್ಕಾಗಿ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಇಷ್ಟಲಿಂಗವನ್ನು ಎಲ್ಲರ ಕರಸ್ಥಲಕ್ಕೆ ನೀಡಿದರು. ಬಸವಯುಗ ಹಾಗೂ ಬಸವೋತ್ತರ ಯುಗದ ಅನೇಕ ಶರಣರ ನೂರಾರು ವಚನಗಳಲ್ಲಿ ಇದಕ್ಕೆ ಆಧಾರವಿದೆ. ಷಟಸ್ಥಲ ಜ್ಞಾನಿ ಚನ್ನಬಸವಣ್ಣನವರು ಒಂದು ವಚನದಲ್ಲಿ ಇಷ್ಟಲಿಂಗ ಬಸವಣ್ಣನವರಿಂದಲೇ ನಿರ್ಮಾಣವಾದದ್ದು ಎಂದು ಉಲ್ಲೇಖಿಸಿದ್ದಾರೆ. ಈ ಸತ್ಯವನ್ನು ಅರಿಯದ ರಾಜಶೇಖರ ಶಿವಾಚಾರ್ಯರ ನುಡಿ ಬಸವತತ್ವಕ್ಕೆ ಅಪಚಾರ ಬಗೆಯುತ್ತದೆ. ಇನ್ಮುಂದಾದರೂ ಇಂಥ ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net