

ಬೀದರ್: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಿಡುಗಡೆಗೊಳಿಸಿದ ಮತಚೋರಿ, ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಉಳಿಸಲು ಮತ್ತು ಭವಿಷ್ಯದ ಚುನಾವಣೆಗಳನ್ನು ಶುದ್ಧೀಕರಿಸಲು ಮಹತ್ವದ ಹಂತವಾಗಿದೆ. ಈ ವರದಿ ಹರಿಯಾಣದಲ್ಲಿನ ಅಕ್ರಮಗಳ ಕುರಿತು ಇಡೀ ದೇಶಕ್ಕೆ ಸತ್ಯವನ್ನು ತೋರಿಸಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸಂಸದ ಸಾಗರ್ ಖಂಡ್ರೆ ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿ ಅವರ ವರದಿಯ ಪ್ರಕಾರ, ನಕಲಿ ಮತದಾರರು, ನಕಲಿ ಫೋಟೋಗಳು, ಅಮಾನ್ಯ ವಿಳಾಸ, ಗುಂಪು ಮತದಾರರ ನೋಂದಣಿ, ವಿರೋಧ ಪಕ್ಷದ ಮತದಾರರ ಹೆಸರುಗಳ ಅಳಿಕೆ ಸೇರಿದಂತೆ ಹಲವಾರು ಅಕ್ರಮಗಳು ಬಿಜೆಪಿ ಆಶ್ರಯದಲ್ಲಿ ನಡೆದಿವೆ. ಒಟ್ಟು ಮತಪಟ್ಟಿಯಲ್ಲಿ 25,41,144 ನಕಲಿ ಮತದಾರರಿದ್ದಾರೆ. ಒಂದಕ್ಕಿಂತ ಹೆಚ್ಚು ಬಾರಿ ಹೆಸರು ಹೊಂದಿರುವವರು 5.21 ಲಕ್ಷ ಮತ್ತು ವಿಳಾಸವೇ ಸರಿಯಾಗಿಲ್ಲದ ಮತ ದಾರರ ಸಂಖ್ಯೆ 93,174. ಬ್ರೆಜಿಲ್ನ ರೂಪದರ್ಶಿ ಫೋಟೋ 10 ಬೂತ್ ಗಳಲ್ಲಿ 22 ಬಾರಿ ಬಳಸಲಾಗಿದೆ. ಸೀಮಾ, ಸರಸ್ವತಿ, ಸ್ವೀಟಿ ಮುಂತಾದ ಹೆಸರುಗಳಲ್ಲಿ ಈ ಫೋಟೋ ಬಳಸಿಕೊಳ್ಳಲಾಗಿದೆ ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಹರಿಯಾಣದ ಮತಚೋರಿ ಒಬ್ಬ ವ್ಯಕ್ತಿ ಒಂದು ಮತ ಎಂಬ ಸಿದ್ಧಾಂತವನ್ನೇ ದುರ್ಬಲಗೊಳಿಸಿದೆ. ಈಗ ಇದು ಕೇವಲ ವೋಟ್ ಚೋರಿಯಲ್ಲ, ಜನರ ಆಡಳಿತ ಹಕ್ಕುಗಳ ಸರ್ಕಾರ ಚೋರಿಯಾಗಿದೆ. ಈ ಘಟನೆ ರಾಜ್ಯದ ಆಳಂದ ಕ್ಷೇತ್ರದಲ್ಲಿ ನಡೆದಿದ್ದು, ಆರು ಸಾವಿರಕ್ಕೂ ಹೆಚ್ಚು ನಿಜವಾದ ಮತದಾರರ ಅಳಿಕೆ ಪ್ರಕರಣದಂತೆಯೇ ಮಾದರಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಈ ವಿಷಯವನ್ನು ರಾಷ್ಟ್ರ ಮಟ್ಟದಲ್ಲಿ ತನಿಖೆ ನಡೆಸಬೇಕು, ಮತದಾರರ ಪಟ್ಟಿಯ ಸಂಪೂರ್ಣ ಪಾರದರ್ಶಕತೆ ಮತ್ತು ಸುಧಾರಣೆಗೆ ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ನಾನು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇನೆ.
ಜನತೆ ತಮ್ಮ ಮತದಾನದ ಹಕ್ಕನ್ನು ಕಾಪಾಡಿಕೊಳ್ಳುವುದು ಪ್ರಜಾಸತ್ತಾತ್ಮಕ ಕರ್ತವ್ಯ. ಯುವ ಮತದಾರರು ಈ ಮತಚೋರಿಯ ದೀರ್ಘಾವಧಿಯ ಪರಿಣಾಮಗಳನ್ನು ಅರಿತು, ನ್ಯಾಯ ಸಮ್ಮತ ಚುನಾವಣೆಗೆ ಹೋರಾಡಬೇಕು. ಏಕೆಂದರೆ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ನ್ಯಾಯದ ಹಕ್ಕುಗಳು ಚುನಾವಣೆಯ ಫಲಿತಾಂಶದ ಮೇಲೆ ನಿಂತಿವೆ. ಭಾರತವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ತಿಳಿಸಿದ್ದಾರೆ.