

ಬೀದರ್: ವಾಯು ಮಾಲಿನ್ಯ ತಡೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಭಾಲ್ಕಿಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುಹಮ್ಮದ್ ಜಾಫರ್ ಸಾದಿಕ್ ಹೇಳಿದರು.
ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಶ್ರೀ ಜ್ಞಾನದೇವೇಂದ್ರ ಸ್ಮಾರಕ ಪ್ರಾಥಮಿಕ ಶಾಲೆಯಲ್ಲಿ ಭಾಲ್ಕಿಯ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಗುರುವಾರ ಆಯೋಜಿಸಿದ್ದ ವಾಯು ಮಾಲಿನ್ಯ ಜಾಗೃತಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾಹನಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಹೆಚ್ಚು ಹೆಚ್ಚು ಸಮೂಹ ಸಾರಿಗೆ, ಸೈಕಲ್ ಹಾಗೂ ಎಲೆಕ್ಟ್ರಿಕಲ್ ವಾಹನಗಳನ್ನು ಬಳಸಬೇಕು ಎಂದು ತಿಳಿಸಿದರು.
ಅಧಿಕ ಆಮ್ಲಜನಕ ಹೊರ ಸೂಸುವ ಕದಂಬ, ಅರಳಿ, ಬಸವನಪಾದ, ಬೇವು ಮತ್ತಿತರ ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದು ತಿಳಿಸಿದರು.
ವಾಯು ಮಾಲಿನ್ಯವು ಜಗತ್ತಿನ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತಿದೆ. ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‍ನಂತಹ ರೋಗಗಳಿಂದ ಮನುಷ್ಯ ಪ್ರಾಣ ಕಳೆದುಕೊಳ್ಳಲು ಸಹ ಕಾರಣವಾಗುತ್ತಿದೆ. ಮಾಲಿನ್ಯ ತಡೆಯದಿದ್ದರೆ ಭವಿಷ್ಯದಲ್ಲಿ ಆಮ್ಲಜನಕವನ್ನು ಹಣ ಕೊಟ್ಟು ಖರೀದಿಸುವ ಪರಿಸ್ಥಿತಿ ಬರಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಪರಿಷತ್ ಸದಸ್ಯ ಸುಭಾಷ್ ವಿ. ಗಂಗಾ ಮಾತನಾಡಿ, ಬೇರೆ ಯಾವ ಗೃಹದಲ್ಲೂ ಇರದ ಆಮ್ಲಜನಕ ಹಾಗೂ ನೀರು ಭೂಮಿ ಮೇಲಷ್ಟೇ ಇದೆ. ಹೀಗಾಗಿ ಇದನ್ನು ಉಳಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಶಾಲಾ ಬಸ್‍ಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಮೋಟಾರು ವಾಹನ ಇನ್‍ಸ್ಪೆಕ್ಟರ್ ವೀರಮ್ಮ, ಮಾಲಿನ್ಯ ಉಂಟು ಮಾಡುವ ದುಷ್ಪರಿಣಾಮ ಕುರಿತು ಆದಿತ್ಯ ಸುಭಾಷ್ ಗಂಗಾ ಮಾತನಾಡಿದರು.
ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಮುಖರಾದ ದತ್ತಾತ್ರಿ ಪಾಂಚಾಳ್, ಮಂಜುಳಾ ಗಂಗಾ, ಪರಮೇಶ್ವರ ಇಲ್ಲಾಳೆ, ಗಣೇಶ್ ಜಾಧವ್, ಪರಶುರಾಮ ಇದ್ದರು. ತಾನಾಜಿ ಬಾಲೂರೆ ಸ್ವಾಗತಿಸಿದರು.