ಸಿ.ಟಿ. ರವಿ ಹೇಳಿಕೆಗೆ ಕಾಂಗ್ರೆಸ್ ತೀವ್ರ ಖಂಡನೆ

Shankar Raddy Chitta
Published on

ಬೀದರ್: ಸವಿತಾ ಸಮಾಜದ ಕುರಿತು ಬಿಜೆಪಿ ಮುಖಂಡ ಸಿ.ಟಿ. ರವಿ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ಇತರ ಹಿಂದುಳಿದ ವರ್ಗಗಳ (ಒಬಿಸಿ)ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ರೆಡ್ಡಿ ಚಿಟ್ಟಾ ತೀವ್ರವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ ಅವರು ಸವಿತಾ ಸಮಾಜದ ನಿಷೇಧಿತ ಪದ ಬಳಸಿ, ಸಮಾಜವನ್ನು ಅವಮಾನಿಸಿದ್ದಾರೆ. ಹಿಂದುಳಿದ ವರ್ಗಗಳಿಗೆ ನೋವು ಉಂಟು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಒಂದು ಸಮುದಾಯವನ್ನು ಸಾರ್ವಜನಿಕವಾಗಿ ಅಪಮಾನಿಸುವುದು ಅಕ್ಷಮ್ಯ. ಸವಿತಾ ಸಮಾಜದ ವಿರುದ್ಧದ ಸಾರ್ವಜನಿಕ ಹೇಳಿಕೆ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ. ಸಮಾಜದಲ್ಲಿ ಜಾತಿ ಆಧಾರಿತ ತಾರತಮ್ಯ, ದ್ವೇಷ ಹಾಗೂ ಅಶಾಂತಿಗೆ ಕಾರಣ ಆಗುವಂಥದ್ದಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸಣ್ಣ ಸಣ್ಣ ಸಮುದಾಯಗಳನ್ನು ಕೀಳಾಗಿ ಕಾಣುವುದು ಬಿಜೆಪಿಯ ಸಂಸ್ಕೃತಿಯಾಗಿದೆ. ಆ ಪಕ್ಷದ ನಾಯಕರು ಜಾತಿಗಳನ್ನು ವೃತ್ತಿಯ ಹೆಸರಲ್ಲಿ ಹಂಗಿಸುವ ಚಾಳಿ ಬೆಳೆಸಿಕೊಂಡಿದ್ದಾರೆ. ಇದಕ್ಕೆ ಸಿ.ಟಿ. ರವಿ ಅವರ ಹೇಳಿಕೆಯೇ ತಾಜಾ ಉದಾಹರಣೆ ಎಂದು ಹೇಳಿದ್ದಾರೆ.

ಸವಿತಾ ಸಮಾಜವನ್ನು ಅಪಮಾನಿಸಿದ ಸಿ.ಟಿ. ರವಿ ವಿರುದ್ಧ ಬಿಜೆಪಿ ವರಿಷ್ಠರು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net