

ಬೀದರ್: ಭಾಲ್ಕಿ ತಾಲೂಕಿನ ನೀಲಮನಳ್ಳಿ ತಾಂಡಾ ಹತ್ತಿರದ ಬೀದರ್-ಹುಮನಾಬಾದ್ ಹೆದ್ದಾರಿಯಲ್ಲಿ ಬುಧವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಯಾತ್ರಿಕರು ಮೃತಪಟ್ಟಿದ್ದು, ಒಬ್ಬ ಗಾಯಗೊಂಡಿದ್ದಾನೆ.
ನೆರೆಯ ತೆಲಂಗಾಣದ ನಾರಾಯಣಖೇಡ್ ತಾಲೂಕಿನ ಜಗನ್ನಾಥಪುರದ ರಾಚಪ್ಪ ರಾಮಚಂದ್ರಪ್ಪ ಬಿರಾದಾರ್ (51), ಚಾಲಕ ನವನಾಥ ಶರಣಪ್ಪ (25), ಯಲ್ಲವಾಯಿ ಗ್ರಾಮದ ನಾಗರಾಜು ಇಸ್ಟಯ್ಯಾ (38) ಸ್ಥಳದಲ್ಲೇ ಮೃತಪಟ್ಟಿದ್ದು, ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಕಾಶೀನಾಥ ರಾಮಶೆಟ್ಟಿ (62) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಪ್ರತಾಪ್ ಮಾಣಿಕರಾವ ಬಿರಾದಾರ (38) ಸ್ಥಿತಿ ಚಿಂತಾಜನಕವಾಗಿದೆ.
ಕಾರಿನಲ್ಲಿ ತೆಲಂಗಾಣದ ಜಗನ್ನಾಥಪುರದಿಂದ ಐವರು ಮಂಗಳವಾರ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ದೇವಲಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ವಾಪಸಾಗುವಾಗ ಎದುರಿನಿಂದ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದ್ದು, ರಭಸಕ್ಕೆ ಎರಡೂ ವಾಹನಗಳು ನಜ್ಜುಗುಜ್ಜಾಗಿವೆ.
ರಸ್ತೆ ಮಧ್ಯೆ ಅಪಘಾತ ಸಂಭವಿಸಿದ್ದರಿಂದ ಹೆದ್ದಾರಿಯ ಎರಡೂ ಬದಿ ವಾಹನಗಳು ಸಾಲಾಗಿ ನಿಂತಿದ್ದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಆಗಿತ್ತು. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಜೆಸಿಬಿ ಯಂತ್ರದಿಂದ ಎರಡು ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಧನ್ನೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.