ಹೊಸಳ್ಳಿ ಆರೋಪ ಸತ್ಯಕ್ಕೆ ದೂರ

pressmeet
Published on

ಬೀದರ್: ಇಲ್ಲಿನ ಬಿವಿಬಿ ಮಹಾವಿದ್ಯಾಲಯದ ಎದುರಿರುವ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ಯಂತ್ರ ಅಳವಡಿಸದೆ ಹಣ ಲೂಟು ಮಾಡಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಯಂತ್ರ ಭದ್ರವಾಗಿದೆ ಎಂದು ಮಹಾನಗರ ಪಾಲಿಕೆ ಅಧ್ಯಕ್ಷ ಮಹ್ಮದ್ ಗೌಸ್ ತಿಳಿಸಿದರು.

ಪೌರಾಡಳಿತ ಸಚಿವ ರಹೀಮ್ ಖಾನ್, ನನ್ನ ಹಾಗೂ ಪಾಲಿಕೆ ವಿರುದ್ಧ ಸದಸ್ಯ ಶಶಿ ಹೊಸಳ್ಳಿ ಸುಳ್ಳು ಆರೋಪ ಹೋರಿಸಿದ್ದಾರೆ. ಚಿತಾಗಾರ ಯಂತ್ರ ಗೋರನಳ್ಳಿಯಲ್ಲಿರುವ ಎಸ್ಟಿಪಿಯಲ್ಲಿ ಇಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

2020-21ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ಜಿಲ್ಲೆಗೆ ಎರಡು ಚಿತಾಗಾರ ಯಂತ್ರಗಳು ಮಂಜೂರಿಯಾಗಿದ್ದು ನಿಜ. ಆದರೆ ಆ ಸಮಯದಲ್ಲಿ ಆಡಳಿತ ಮಂಡಳಿ ಅಸ್ತಿತ್ವದಲ್ಲಿರಲಿಲ್ಲ. ಜಿಲ್ಲಾಧಿಕಾರಿ ಅಡಳಿತಾಧಿಕಾರಿಗಳಾಗಿದ್ದರು. ಅವರ ನೇತೃತ್ವದಲ್ಲಿಯೇ ಖರೀದಿ ಕಾರ್ಯ ನಡೆದಿದೆ. ನಗರದ ಹೊರವಲಯದ ಶ್ರೀ ನರಸಿಂಹ ಸ್ವಾಮಿ ದೇವಸ್ಥಾನದ ಬಳಿಯ ರುದ್ರಭೂಮಿಯಲ್ಲಿ ಒಂದು ಯಂತ್ರ ಅಳವಡಿಕೆ ಮಾಡಲಾಗಿದೆ. ಸೌಕರ್ಯ ಕೊರತೆ ಕಾರಣ ಬಿವಿಬಿ ಕಾಲೇಜು ಎದುರಿನ ರುದ್ರಭೂಮಿಯಲ್ಲಿ ಇನ್ನೊಂದು ಯಂತ್ರ ಅಳವಡಿಕೆ ಮಾಡಿಲ್ಲ ಎಂದು ಹೇಳಿದರು.

ಬಿವಿಬಿ ಕಾಲೇಜಿನ ಎದುರಿನ ರುದ್ರಭೂಮಿಯಲ್ಲಿ ಯಂತ್ರ ಅಳವಡಿಕೆಗೆ ಅಗತ್ಯ ಸೌಕರ್ಯಗಳಿಲ್ಲ. ಬರುವ ಎರಡು ತಿಂಗಳಲ್ಲಿ ಈ ರುದ್ರಭೂಮಿಗೆ ಸಂಬಂಸಿದ ಯಂತ್ರ ಅಳವಡಿಕೆಗಾಗಿ ಬೇಕಾಗುವ ಬೆಡ್, ಸೆಡ್ ಸೌಲಭ್ಯ, ವಿದ್ಯುತ್, ಕಾವಲು ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಕರ್ಯಗಳ ಅಭಿವೃದ್ಧಿಗಾಗಿ ಈಗಾಗಲೇ ಪೌರಾಡಳಿತ ಸಚಿವ ರಹೀಮ್ ಖಾನ್ ಅವರು ನಾಲ್ಕು ಕೋಟಿ ರೂ. ಮೀಸಲಿರಿಸಿದ್ದಾರೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಸದಸ್ಯರಾದ ಪ್ರಶಾಂತ ದೊಡ್ಡಿ, ಹಣಮಂತ ಮಲ್ಕಾಪುರೆ, ನವೀದ್ ಶೇರಿಕಾರ್, ಸೌದ್ ಶೇರಿಕಾರ್, ಮಾಜಿ ಸದಸ್ಯ ಧನರಾಜ ಹಂಗರಗಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದಕುಮಾರ ಅಪ್ಪೆ, ಪ್ರಮುಖರಾದ ಆಜಮ್, ಸೂರ್ಯಕಾಂತ ಸಾದುರೆ, ಮಹ್ಮದ್ ಯುಸೂಫ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net