

ಬೀದರ್: ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘ ಆಗ್ರಹಿಸಿದೆ.
ಸಂಘದ ಪದಾಧಿಕಾರಿಗಳು ನಗರದಲ್ಲಿ ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು. ರಾಜ್ಯದ 102 ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ 1,600 ಅತಿಥಿ ಉಪನ್ಯಾಸಕರು ಇದ್ದಾರೆ. ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಅನೇಕರು ವಯೋಮಿತಿ ಮೀರುವ ಹಂತದಲ್ಲಿದ್ದಾರೆ. ಅದಾಗಿಯೂ ಅವರಿಗೆ ಸೇವಾ ಭದ್ರತೆ ಕಲ್ಪಿಸಿಲ್ಲ ಎಂದು ಸಂಘದ ರಾಜ್ಯ ಅಧ್ಯಕ್ಷ ಪ್ರವೀಣಕುಮಾರ ಮೀರಾಗಂಜಕರ್ ಗಮನ ಸೆಳೆದರು.
ಬೇರೆ ಬೇರೆ ಇಲಾಖೆಗಳಲ್ಲಿ ಗುತ್ತಿಗೆ ನೌಕರರಿಗೆ 12 ತಿಂಗಳಲ್ಲಿ ಒಂದು ದಿನದ ಸಂಬಳ ಕಡಿತಗೊಳಿಸಿ, ಸಂಬಳ ಕೊಡಲಾಗುತ್ತಿದೆ. ಆದರೆ, ಪಾಲಿಟೆಕ್ನಿಕ್ ಅತಿಥಿ ಉಪನ್ಯಾಸಕರಿಗೆ 10 ತಿಂಗಳ ವೇತನ ಮಾತ್ರ ನೀಡಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಪಾಲಿಟೆಕ್ನಿಕ್‍ಗಳಲ್ಲಿ ಹೊಸ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದೆ, ಈಗಿರುವ ಅತಿಥಿ ಉಪನ್ಯಾಸಕರನ್ನೇ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಗುಜರಾತ್, ಹರಿಯಾಣ ಮಾದರಿಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು. ಪ್ರಶ್ನೆ ಪತ್ರಿಕೆ ಮೌಲ್ಯಮಾಪನ, ತರಬೇತಿಗೆ ಅವಕಾಶ ನೀಡಬೇಕು. ಮಹಿಳಾ ಅತಿಥಿ ಉಪನ್ಯಾಸಕರಿಗೆ ಹೆರಿಗೆ ರಜೆ ಕೊಡಬೇಕು. ಪ್ರತಿ ತಿಂಗಳು ವೇತನ ಬಿಡುಗಡೆ ಮಾಡಬೇಕು ಎಂದು ಬೇಡಿಕೆ ಮಂಡಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಕಾಂತ ವಿಶ್ವಕರ್ಮ, ಪ್ರಮುಖರಾದ ಸಂತೋಷ್ ಲದ್ದೆ, ನಿತೀಶ್ ಕಾರಬಾರಿ, ಶರಣಬಸಪ್ಪ ವಾಲೆ, ಅವಿನಾಶ್, ಗೋವಿಂದ ನಾಯಕ್, ಫಾತಿಮಾ ಫಾರೂಕ್, ಕೀರ್ತಿ ಹಾಪಲಿ, ಅಶ್ವಿನಿ, ಪೂರ್ಣಿಮಾ ಸ್ವಾಮಿ, ಪ್ರವೀಣ್ ತೋರಣೆ, ಹುಸ್ನಜಬೀನ್ ಇದ್ದರು.