ಯತ್ನಾಳ್ ಹೇಳಿಕೆಗೆ ಖಂಡನೆ

basavraj bulla
Published on

ಬೀದರ್: ರಾಜ್ಯದ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಅವರ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಕ್ಸಲ ಪದ ಬಳಿಕೆ ಮಾಡಿರುವುದಕ್ಕೆ ಖಂಡಿಸಲಾಗುವುದು ಎಂದು ರಾಜ್ಯ ಜಾಗತಿಕ ಲಿಂಗಾಯತ ಸಮನ್ವಯ ಸಮಿತಿ ಉಪಾಧ್ಯಕ್ಷ ಬಸವರಾಜ ಬುಳ್ಳಾ ಹೇಳಿದರು.

ಕೆಟ್ಟ ಪದಗಳನ್ನು ಬಳಸುವ ಮನಸ್ಥಿತಿ ಇರುವುದರಿಂದಲೇ ಯತ್ನಾಳ್ ಅವರಿಗೆ ಬಿಜೆಪಿ ಉಚ್ಛಾಟಿಸಿದೆ. 2028ರಲ್ಲಿ ವಿಜಯಪುರ ಜನರು ಅವರನ್ನು ಸೋಲಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಚಿವ ಪಾಟೀಲ್ ಲಿಂಗಾಯತ ಸಮುದಾಯದ ಬಲಿಷ್ಠ ನಾಯಕ. ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಜರುಗಿತು. ಸಮಾವೇಶವನ್ನು ಯಶಸ್ವಿಗೊಳಿಸುವಲ್ಲಿ ಪಾಟೀಲ್ ಪಾತ್ರ ಹಿರಿದು. ಸಮಾವೇಶದಲ್ಲಿ ಕೇವಲ ಐದಾರು ಸಾವಿರ ಜನರಿದ್ದರೆಂದು ಯತ್ನಾಳ್ ಹೇಳಿಕೆ ಹಾಸ್ಯಾಸ್ಪದ. ಕೇವಲ ಬೀದರ್ನಿಂದ ಪ್ರತ್ಯೇಕ ರೈಲಿನ ಮೂಲಕ ಸಾವಿರಾರು ಬಸವ ಭಕ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಹಸ್ರ ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.

ನಮ್ಮದು ಸುಸಂಸ್ಕೃತ ನಾಡು. ಬಸವಣ್ಣನವರು ಬಾಳಿ ಬದುಕಿದ ನೆಲೆ ಇದು. ಇಂಥ ನೆಲದಲ್ಲಿ ಈ ರೀತಿಯ ಅವಿವೇಕಿತನ ಹೇಳಿಕೆ ನೀಡುವುದು ಸರಿಯಲ್ಲ. ಸಮಾಜದಲ್ಲಿ ಮಠಾಶರಿಗೆ ಅಪಾರ ಗೌರವವಿದೆ. ಆದರೆ ಈಚೆಗೆ ಕನ್ಹೇರಿ ಪೂಜ್ಯರು ಬಸವ ಸಂಸ್ಕೃತಿ ಅಭಿಯಾನ ಕುರಿತು ಕೆಟ್ಟ ಪದಗಳಿಂದ ಹೇಳಿಕೆ ನೀಡಿದ್ದು, ಇಡೀ ಕಾವಿಧಾರಿಗಳಿಗೆ ಮಾಡಿದ ಅಪಮಾನ. ಕನ್ಹೇರಿ ಶ್ರೀ ಹೇಳಿಕೆ ಖಂಡಿಸುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net