ತಂಬಾಕು ಮುಕ್ತ ಬೀದರ್ ಅಭಿಯಾನ

Nagarik Samiti
Published on

ಬೀದರ್: ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯು ಜಿಲ್ಲೆಯನ್ನು ತಂಬಾಕು ಮುಕ್ತಗೊಳಿಸಲು ಅಭಿಯಾನ ಆರಂಭಿಸಿದೆ.

ಸಮಿತಿಯ ಪದಾಧಿಕಾರಿಗಳು ಗಾವಾನ್ ಚೌಕ್, ಮುಖ್ಯ ರಸ್ತೆ ಸೇರಿದಂತೆ ನಗರದ ವಿವಿಧೆಡೆ ಬುಧವಾರ ಗುಟ್ಕಾ, ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನ ಮಾರಾಟ ಮಾಡದ ಅಂಗಡಿಗಳ ಮಾಲೀಕರನ್ನು ಸನ್ಮಾನಿಸಿದರು.

ವ್ಯಕ್ತಿ ಹಾಗೂ ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾದ ಉತ್ಪನ್ನಗಳನ್ನು ಮಾರಾಟ ಮಾಡದಿರುವ ಅವರ ಕಾರ್ಯವನ್ನು ಮುಕ್ತ ಕಂಠದಿಂದ ಪ್ರಶಂಶಿಸಿದರು. ಅಂಗಡಿಗಳ ಮುಂಭಾಗದಲ್ಲಿ ‘ನಾವೆಲ್ಲರೂ ಆರೋಗ್ಯಕರ ಜೀವನ ನಡೆಸಲು ನಾವು ಗುಟ್ಕಾ ಮತ್ತು ಸಿಗರೇಟ್ ಮಾರಾಟ ಮಾಡುವುದಿಲ್ಲ' ಎಂಬ ಬರಹದ ಸ್ಟಿಕ್ಕರ್ ಅಂಟಿಸಿದರು.

ಇದಕ್ಕೂ ಮುನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು,  ಮಿತಿಯಿಂದ ಹೊರ ತರಲಾದ ಸ್ಟಿಕ್ಕರ್ ಅನ್ನು ಬಿಡುಗಡೆಗೊಳಿಸಿದರು.

ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯು ಯುವಜನರನ್ನು ದುಶ್ಚಟಗಳಿಂದ ದೂರ ಇರಿಸಲು ತಂಬಾಕು ಉತ್ಪನ್ನಗಳ ವಿರುದ್ಧ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬೀದರ್ ನಾಗರಿಕ ಸನ್ಮಾರ್ಗ ಸಮಿತಿ ಸಮಾಜದಲ್ಲಿ ಒಳ್ಳೆಯದನ್ನು ಪರಿಸರಿಸಲು ಹಾಗೂ ಕೆಟ್ಟದನ್ನು ಹೋಗಲಾಡಿಸಲು ವಿವಿಧ ಚಟುವಟಿಕೆಗಳನ್ನು ನಡೆಸಲಿದೆ. ಮೊದಲ ಹಂತದಲ್ಲಿ ಬೀದರ್ ಅನ್ನು ತಂಬಾಕು ಮುಕ್ತಗೊಳಿಸುವ ಅಭಿಯಾನ

ಆರಂಭಿಸಲಾಗಿದೆ ಎಂದು ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದರು.

ಸಮಿತಿಯು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದ ವ್ಯಾಪಾರಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಿದೆ. ತಂಬಾಕು ಉತ್ಪನ್ನಗಳ ವಿರುದ್ಧ ಜನ ಜಾಗೃತಿಯ ಸ್ಟಿಕ್ಕರ್, ಪೋಸ್ಟರ್‍ಗಳನ್ನು ಅಂಟಿಸಲಿದೆ. ದೇವರು ಬದುಕುವುದಕ್ಕಾಗಿ ಸಾಕಷ್ಟು ವಸ್ತುಗಳ ಮಾರಾಟಕ್ಕೆ ಅವಕಾಶ ಕೊಟ್ಟಿದ್ದಾನೆ. ಹೀಗಾಗಿ ವ್ಯಾಪಾರಿಗಳು ಜನ ಹಿತದ ವಸ್ತುಗಳನ್ನು ಮಾರಾಟ ಮಾಡಬೇಕು. ಜನರ ಜೀವಕ್ಕೆ ಮಾರಕವಾದ ತಂಬಾಕು ಉತ್ಪನ್ನಗಳ ಮಾರಾಟ ಮಾಡದಿರಲು ಸಂಕಲ್ಪ ತೊಡಬೇಕು. ಶಾಲಾ, ಕಾಲೇಜುಗಳ 100 ಮೀಟರ್ ವ್ಯಾಪ್ತಿಯೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದೆಂಬ ನಿಯಮ ಪಾಲಿಸಬೇಕು ಎಂದು ಹೇಳಿದರು.

ಬೀದರ್ ನಗರ ಹಾಗೂ ಜಿಲ್ಲೆಯನ್ನು ತಂಬಾಕು ಉತ್ಪನ್ನ ಮುಕ್ತಗೊಳಿಸಲು ಸಂಘ ಸಂಸ್ಥೆಗಳು ಹಾಗೂ ನಾಗರಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಸಮಿತಿಯ ಕಾರ್ಯದರ್ಶಿ ಅಶೋಕ ವಡಗಾವೆ, ಮನೋಹರ ದಂಡೆ, ಅಶ್ಫಾಕ್ ಮೆಟ್ರೊ, ಮೌಲಾನಾ

ಸಿರಾಜುದ್ದೀನ್, ಮೌಲಾನಾ ಮೋನಿಸ್ ಕಿರ್ಮಾನಿ, ನಿವೃತ್ತ ಎಇಇ ಮಕ್ಸೂದ್ ಖಾನ್, ಶಂಭುಲಿಂಗ ವಾಲ್ದೊಡ್ಡಿ, ಟೌನ್ ಸಿಪಿಐ, ಪಿಎಸ್‍ಐ ತಸ್ಲಿಮ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net