ಕೆಕೆಆರ್ ಡಿಬಿ ಕಾಮಗಾರಿಯಲ್ಲಿ ಭ್ರಷ್ಟಾಚಾರ

Deepak Patil
Published on

ಔರಾದ್: ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದ ಶಾಲಾ ಕಟ್ಟಡ ದುರಸ್ತಿ, ಸೋಲಾರ್ ಪ್ಯಾನೆಲ್ ಅಳವಡಿಕೆ ಹಾಗೂ ಕೊಳವೆಬಾವಿ ಕೊರೆಸುವ ಕಾಮಗಾರಿಗಳಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದೆ ಎಂದು ಚಾಂದೋರಿ ಗ್ರಾಪಂ ಮಾಜಿ ಅಧ್ಯಕ್ಷ ದೀಪಕ್ ಪಾಟೀಲ್ ಆರೋಪಿಸಿದ್ದಾರೆ

ಬಹುತೇಕ ಕಡೆಗಳಲ್ಲಿ ಕಾಮಗಾರಿ ಕಳಪೆಯಾಗಿದೆ. ಅನೇಕ ಕಡೆ ಶಾಲಾ ಕಟ್ಟಡ ದುರಸ್ತಿಪಡಿಸದೆ, ಸೋಲಾರ್ ಪ್ಯಾನೆಲ್ ಅಳವಡಿಸದೆ, ಕೊಳವೆಬಾವಿ ಕೊರೆಸದೆ ಹಣ ಎತ್ತಿ ಹಾಕಲಾಗಿದೆ ಎಂದು ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ದೂರಿದ್ದಾರೆ.

ಮಂಡಳಿಯ ಮ್ಯಾಕ್ರೊ ಯೋಜನೆಯ ಅಕ್ಷರ ಅವಿಷ್ಕಾರ ಕಾರ್ಯಕ್ರಮದಡಿ ಎರಡು ವರ್ಷದಲ್ಲಿ 41 ಕೋಟಿ ರೂ. ಒದಗಿಸಿದ್ದು, ಒಂದು ಶಾಲೆ ದುರಸ್ತಿಗೆ 25 ಲಕ್ಷದಿಂದ 30 ಲಕ್ಷ ರೂ., ಕೊಳವೆಬಾವಿ ಕೊರೆಸಲು 5 ಲಕ್ಷ ರೂ. ನಿಗದಿಪಡಿಸಲಾಗಿದೆ. ಸ್ಥಳೀಯ ಶಾಸಕರು ಕಾಮಗಾರಿಗಳನ್ನು ಕೆಆರ್ ಡಿಬಿಗೆ ವಹಿಸಿಕೊಟ್ಟಿದ್ದಾರೆ. ಜನಪ್ರತಿನಿಧಿ, ಅಧಿಕಾರಿ ಹಾಗೂ ಗುತ್ತಿಗೆದಾರರ ಒಳ ಒಪ್ಪಂದದೊಂದಿಗೆ ಕಳಪೆ ಕಾಮಗಾರಿ ಕೈಗೊಂಡು ಸರ್ಕಾರದ ಅನುದಾನ ಕೊಳ್ಳೆ ಹೊಡೆಯಲಾಗಿದೆ ಎಂದು ಆಪಾದಿಸಿದ್ದಾರೆ.

ಔರಾದ್ ಕ್ಷೇತ್ರದಲ್ಲಿನ ಅವ್ಯವಹಾರ ಕುರಿತು ಅಗತ್ಯ ದಾಖಲೆಗಳೊಂದಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಂಬಂಧಿಸಿದ ಇಲಾಖೆ, ಕೆಕೆಆರ್ಡಿಬಿ ಕಾರ್ಯದರ್ಶಿ, ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರಿಗೆ ದೂರು ಸಲ್ಲಿಸಿದ್ದೇನೆ. ಜಿಪಂ ಸಿಇಒ ಅವರು ಸೆ.15ರಂದು ಮೂರನೇ ತಂಡದ ತನಿಖೆಗೆ ಆದೇಶಿಸಿದ್ದರು. ನಂತರ ಸೆ.18ರಂದು ಔರಾದ್ ನ ಪಿಆರ್ಇ ಎಇಇ, ಆರ್ಡಬ್ಲ್ಯೂಎಸ್ ಎಇಇ ಹಾಗೂ ಕೆಕೆಆರ್ ಡುಬಿ ಸೆಲ್‌ನ ಎಇಇ ಅವರನ್ನೊಳಗೊಂಡ ತಂಡ ರಚಿಸಿದ್ದರು. ಎರಡೂ ತಂಡಗಳಿಗೆ ತನಿಖೆ ನಡೆಸಿ ವಾರದೊಳಗೆ ವರದಿ ಸಲ್ಲಿಸಲು ಸೂಚಿಸಿದ್ದರು. ಒಂದು ತಿಂಗಳು ಕಳೆದರೂ ಈ ತಂಡಗಳು ತನಿಖೆ ನಡೆಸಿ, ವರದಿ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.

ತನಿಖೆಗೆ ಆದೇಶಿಸಿದ ನಂತರವೂ ಯಾವುದೇ ಕಾಮಗಾರಿ ಬಿಲ್ ತಡೆ ಹಿಡಿದಿಲ್ಲ. ಎಲ್ಲವನ್ನೂ ಪಾವತಿಸಲಾಗಿದೆ. ಹೀಗಾದರೆ ತನಿಖೆ ನಡೆಸಿದ ನಂತರ ಲೋಪ ಕಂಡು ಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವುದು ಹೇಗೆ ? ಔರಾದ್ ಕ್ಷೇತ್ರದಲ್ಲಿ ನಡೆದ ಭ್ರಷ್ಟಾಚಾರದ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net