ಕನ್ನಡ ನಾಮಫಲಕ ಅಳವಡಿಕೆಗೆ ಸೇನೆ ಆಗ್ರಹ

Ganesh patil Janti - Copy
Published on

ಬೀದರ್: ನಗರದ ಅಂಗಡಿ ಮುಂಗಟ್ಟು, ಮಳಿಗೆ, ಆಸ್ಪತ್ರೆ, ಕಚೇರಿ ಮೊದಲಾದವುಗಳ ಮೇಲೆ ಕನ್ನಡ ನಾಮಫಲಕ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಕರ್ನಾಟಕ ಸೇನೆ ಆಗ್ರಹಿಸಿದೆ.

ನಾಮಫಲಕದಲ್ಲಿ ಶೇ 60 ರಷ್ಟು ಕನ್ನಡ ಬಳಸಬೇಕೆಂಬ ಸರ್ಕಾರದ ನಿಯಮ ನಗರದಲ್ಲಿ ಪಾಲನೆಯಾಗುತ್ತಿಲ್ಲ ಎಂದು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಪ್ರಕಟಣೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಮಫಲಕಗಳಲ್ಲಿ ನಿಯಮಾನುಸಾರ ಕನ್ನಡ ಬಳಕೆಗೆ ಕ್ರಮ ಕೈಗೊಳ್ಳದಿದ್ದರೆ ಬರುವ ದಿನಗಳಲ್ಲಿ ಕನ್ನಡ ಬಳಸದ ನಾಮಫಲಕಗಳಿಗೆ ಮಸಿ ಬಳಿಯಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ನಗರದ ಸೌಂದರ್ಯ ಹೆಚ್ಚಿಸಲು ನಗರದಲ್ಲಿ ರಸ್ತೆ ವಿಭಜಕಗಳ ಮಧ್ಯೆ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಆದರೆ, ಅವುಗಳಿಗೆ ಕಾರ್ಯಕ್ರಮಗಳ ಬ್ಯಾನರ್ ಅಳವಡಿಸಲಾಗುತ್ತಿದೆ. ಬೀದಿ ದೀಪಗಳು ಬ್ಯಾನರ್ ಅಳವಡಿಕೆಗೆ ಸೀಮಿತವಾಗಿವೆ ಎಂದು ಬೇಸರ ಹೊರ ಹಾಕಿದ್ದಾರೆ.

ಬ್ಯಾನರ್‍ಗಳ ಮೇಲೆ ಕನ್ನಡ ಬಳಸದಿದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಅವುಗಳ ಅಳವಡಿಕೆಗೆ ಹೇಗೆ ಪರವಾನಗಿ ಕೊಡುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾನರ್ ಅಳವಡಿಸಿ ಬೀದಿ ದೀಪಗಳ ಸೌಂದರ್ಯ ಹಾಳುಗೆಡುವುದನ್ನು ಸೇನೆ ಸಹಿಸುವುದಿಲ್ಲ. ಬೀದಿ ದೀಪಕ್ಕೆ ಅಳವಡಿಸುವ ಬ್ಯಾನರ್‍ಗಳನ್ನು ಹರಿದು ಹಾಕಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net