

ಔರಾದ್: ಮಹಾರಾಷ್ಟ್ರದ ಮಹಿಳೆಯೊಬ್ಬಳು ಕಳೆದುಕೊಂಡಿದ್ದ ಲಕ್ಷಾಂತರ ಮೌಲ್ಯದ ಬಂಗಾರದ ಸರ ಹಾಗೂ ಇತರ ವಸ್ತುಗಳ ಬ್ಯಾಗ್ ಅನ್ನು ಆಧಾರ್ ಕಾಡ್೯ ನೆರವಿನಿಂದ ಸುಂದಾಳ ಗ್ರಾಮದ ವ್ಯಾಪಾರಿ ಜಲೀಲ್ಮಿಯ್ಯಾ ಬಾಗವಾನ್ ಅವರು ಪೊಲೀಸರ ಮೂಲಕ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಹಾರಾಷ್ಟ್ರದ ಲಾತೂರ ಜಿಲ್ಲೆಯ ಉದಗೀರ ತಾಲೂಕಿನ ಮೋಘಾ ಗ್ರಾಮದ ಪೂನಂ ಕಾಳೋಜಿ ಅವರು ದೀಪಾವಳಿ ನಿಮಿತ್ತ ಎರಡು ತೊಲೆ (20 ಗ್ರಾಂ) ಚಿನ್ನದ ಹಾರ ಮಾಡಿಸಿಕೊಂಡು ಮನೆಗೆ ಮರಳುವಾಗ ರಸ್ತೆಯಲ್ಲಿ ಬ್ಯಾಗ್ ಕಳೆದುಕೊಂಡಿದ್ದಾರೆ. ಇದೇ ರಸ್ತೆಯಲ್ಲಿ ಬೈಕ್ ಮೂಲಕ ಬರುತ್ತಿದ್ದ ಜಲೀಲ್ಮಿಯ್ಯಾ ಬಾಗವಾನ್ಗೆ ಈ ಬ್ಯಾಗ್ ಸಿಕ್ಕಿದೆ.
ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಾಗ ಔರಾದ್ ಸಿಪಿಐ ರಘುವೀರಸಿಂಗ್ ಠಾಕೂರ್, ಚಿಂತಾಕಿ ಪಿಎಸ್ಐ ಚಂದ್ರಕಾಂತ ನೀರ್ಣೆ ಸ್ಥಳಕ್ಕೆ ಭೇಟಿ ನೀಡಿ ಬ್ಯಾಗ್ ನಲ್ಲಿದ್ದ ಆಧಾರ್ ಕಾಡ್೯ ಹಾಗೂ ಅಂಗಡಿಯ ರಸೀದಿ ಮೇಲೆ ಇದ್ದ ದೂರವಾಣಿ ನಂಬರ್ಗೆ ಸಂಪರ್ಕಿಸಿ ಚಿನ್ನ ಕಳೆದುಕೊಂಡ ಮಹಿಳೆಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಸುಂಧಾಳಗೆ ಮಹಿಳೆಯನ್ನು ಕರೆಸಿಕೊಂಡು ಬ್ಯಾಗ್ ನಲ್ಲಿನ 20 ಗ್ರಾಂ ಬಂಗಾರ, 30 ಗ್ರಾಂ ಬೆಳ್ಳಿ, ನಗದು 1460 ರೂ. ಮರಳಿ ವಾಪಸ್ ನೀಡಲಾಗಿದೆ. ಗ್ರಾಪಂ ಅಧ್ಯಕ್ಷ ಮಾರುತಿ ಸಿಂಗೋಡೆ, ರಾಮುಲು ಗೌಡ, ಚಂದ್ರಶೇಖರ ಪಾಟೀಲ್, ತಿರುಪತಿ ಬೇಲೂರು ಇತರರಿದ್ದರು.