

ಬೀದರ್: ದೀಪಾವಳಿ ಪಾಡ್ಯದ ನಿಮಿತ್ತ ತಾಲ್ಲೂಕಿನ ಹೊನ್ನಿಕೇರಿ ಗ್ರಾಮದ ಸಿದ್ಧೇಶ್ವರ ದೇವಸ್ಥಾನದಲ್ಲಿ ಬುಧವಾರ ಶ್ರದ್ಧೆ, ಭಕ್ತಿಯಿಂದ ದೀಪೋತ್ಸವ ನಡೆಯಿತು.
ಭಕ್ತರು ದೇವಸ್ಥಾನದ ಹಳೆಯ ಪೀಠಾಧಿಕಾರಿ ಮನೆಯಿಂದ ದೇವಸ್ಥಾನಕ್ಕೆ ಆಗಮಿಸಿ, ಪುಷ್ಕರಣಿ, ಲಿಂಗ ಮಂದಿರ, ಮಾಲಗಂಬ, ಪ್ರತಿ ಮೆಟ್ಟಿಲುಗಳ ಮೇಲೆ ಹಣತೆ ಇಟ್ಟು, ಅದರಲ್ಲಿ ಎಣ್ಣೆ ಹಾಕಿ ದೀಪ ಬೆಳಗಿಸಿದರು.
ಸಿದ್ಧೇಶ್ವರ ಹಾಗೂ ಮಲ್ಲಿಕಾರ್ಜುನ ದೇವರಿಗೆ ಪೂಜೆ ಸಲ್ಲಿಸಿ, ನೈವೇದ್ಯ ಸಮರ್ಪಿಸಿದರು.
ಪ್ರತಿ ವರ್ಷ ದೀಪಾವಳಿ ಪಾಡ್ಯದ ಅಂಗವಾಗಿ ದೀಪೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ದೇವಸ್ಥಾನದ ಪೀಠಾಧಿಕಾರಿಯಾಗಿದ್ದ ಸಿದ್ಧಲಿಂಗಯ್ಯ ಸ್ವಾಮಿ ಪೂಜಾರಿ ಅವರ ನಿಧನದ ನಂತರ ಅವರ ಕಿರಿಯ ಪುತ್ರ ನಾಗಯ್ಯ ಸ್ವಾಮಿ ಪೂಜಾರಿ ಅವರು ದೀಪೋತ್ಸವ ಮುನ್ನಡೆಸುತ್ತಿದ್ದಾರೆ ಎಂದು ಪ್ರಶಾಂತಯ್ಯ ಸ್ವಾಮಿ ಪೂಜಾರಿ ತಿಳಿಸಿದರು.
ಪ್ರಧಾನ ಅರ್ಚಕ ಸಿದ್ಧಯ್ಯ ಸ್ವಾಮಿ, ಪ್ರಮುಖರಾದ ಗದಗಯ್ಯ ಸ್ವಾಮಿ, ಬಾಬಯ್ಯ, ರಾಜಕುಮಾರ, ಲಿಂಗರಾಜ, ಬಸವಕುಮಾರ, ಗುರುಶಾಂತಯ್ಯ, ಶ್ರೀಕಾಂತಯ್ಯ, ವಿಶ್ವನಾಥ, ಆಕಾಶ್ ಮತ್ತಿತರರು ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು.