

ಬೀದರ್: ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಹತ್ತಿರ ಅ.17ರಂದು ನಡೆದಿದ್ದ ಕಾಂಗ್ರೆಸ್ ಪ್ರತಿಭಟನೆ ವೇಳೆ ಮುಖಂಡ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ಸಂಚಾಲಕ ಶ್ರೀಕಾಂತ ಸ್ವಾಮಿ ಬ್ರಾಹ್ಮಣ ಸಮುದಾಯದ ಬಗ್ಗೆ ಅವಾಚ್ಯ, ಅಸಂವಿಧಾನಿಕ ಪದ ಬಳಸಿ ಮಾತನಾಡಿರುವುದವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ಸಮಾಜದ ಮುಖಂಡರು ಖಂಡಿಸಿದ್ದಾರೆ.
ನಗರದಲ್ಲಿ ಭಾನುವಾರ ಕರೆದಿದ್ದ ಸಮಾಜದ ಸಭೆಯಲ್ಲಿ ಶ್ರೀಕಾಂತ ಸ್ವಾಮಿ ವಿರುದ್ಧ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಹೋರಾಟದ ರೂಪುರೇಷೆ ನಿರ್ಧರಿಸಲು ಮಂಗಳವಾರ ಬೆಳಗ್ಗೆ 10ಕ್ಕೆ ಡಾ.ಅಂಬೇಡ್ಕರ್ ವೃತ್ತ ಸಮೀಪದ ಐಬಿಯಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಬ್ರಾಹ್ಮಣ ಮಹಾಸಭಾ ಬೀದರ್ ತಾಲೂಕು ಅಧ್ಯಕ್ಷ ಮನೋಹರ ದಂಡೆ ತಿಳಿಸಿದ್ದಾರೆ.
ವಿಪ್ರ ಸಮಾಜ ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯಲ್ಲಿ ಅತ್ಯಂತ ಗೌರವಪೂರ್ಣ ಸ್ಥಾನ ಹೊಂದಿದೆ. ಭಾರತದ ಜ್ಞಾನ ಶಕ್ತಿಗೆ ಬ್ರಾಹ್ಮಣರ ಕೊಡುಗೆ ಅನನ್ಯ. ಹೀಗಿರುವಾಗ ಯಾರದೋ ಓಲೈಕೆ, ರಾಜಕೀಯ ಸ್ವಾರ್ಥಕ್ಕೆ ವಿಪ್ರ ಸಮಾಜದ ನಿಂದನೆ, ಹಿಯಾಳಿಕೆ ಸಹಿಸಲಾಗದು ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ. ಕೀಳುಮಟ್ಟದ ಹೇಳಿಕೆ ನೀಡಿ ತನ್ನ ವ್ಯಕ್ತಿತ್ವ ತೋರಿಸಿಕೊಟ್ಟಿರುವ ಸ್ವಾಮಿ ವಿರುದ್ಧ ಕಾನೂನು ಕ್ರಮದ ಬಗ್ಗೆ ಚರ್ಚಿಸಲು ಮಂಗಳವಾರ ಕರೆದಿರುವ ಸಭೆಗೆ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಲಹೆ ಸೂಚನೆ ನೀಡುವಂತೆ ದಂಡೆ ಮನವಿ ಮಾಡಿದ್ದಾರೆ.