ಕನ್ಹೇರಿ ಶ್ರೀ ವಿರುದ್ಧ ಕೇಸ್ ದಾಖಲಿಸಿ

basavpara sangatane
Published on

ಬೀದರ್: ಲಿಂಗಾಯತರು ಹಾಗೂ ಲಿಂಗಾಯತ ಮಠಾಧೀಶರ ಕುರಿತು ಅವಹೇಳನಕಾರಿ ಮತ್ತು ಅವ್ಯಾಚ್ಯ ಶಬ್ದ ಬಳಸಿ ನಿಂದಿಸಿರುವ ಕೊಲ್ಲಾಪುರ ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರನ್ನು ಬಂಧಿಸಿ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಆಗ್ರಹಿಸಿ ಬಸವಪರ ಸಂಘಟನೆಗಳ ಒಕ್ಕೂಟ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿತು.

ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಒಕ್ಕೂಟದ ಕಾರ್ಯಕರ್ತರು ಕನ್ಹೇರಿ ಶ್ರೀ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರಮುಖ ರಸ್ತೆಗಳ ಮೂಲಕ ಡಾ.ಅಂಬೇಡ್ಕರ್ ವೃತ್ತದವರೆಗೆ ರ್ಯಾಲಿ ನಡೆಸಿ ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.

ಬೆಂಗಳೂರಿನಲ್ಲಿ ಇತ್ತೀಚೆಗೆ ಜಾಗತಿಕ ಲಿಂಗಾಯತ ಮಹಾಸಭಾ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದ ನಾಡಿನ ಪೂಜ್ಯರ ಬಗ್ಗೆ ಅವಾಚ್ಯವಾಗಿ ಮಾತನಾಡುವುದರ ಮೂಲಕ ಕಾಡಸಿದ್ದೇಶ್ವರ ಸ್ವಾಮೀಜಿ ಅಜ್ಞಾನಿಗಳಂತೆ ವರ್ತಿಸಿದ್ದಾರೆ. ಬಸವಣ್ಣನವರನ್ನು ದ್ವೇಷಿಸುವ ಈ ವ್ಯಕ್ತಿ ಲಿಂಗಾಯತ ಮಠಾಧೀಶರನ್ನು ಅವಮಾನಿಸಿರುವುದು ಅಕ್ಷಮ್ಯ. ಕಾಡಸಿದ್ದೇಶ್ವರ ಶ್ರೀಗಳನ್ನು ಕನ್ಹೇರಿ ಮಠದಿಂದ ಉಚ್ಚಾಟಿಸಿ ಕ್ರಿಮಿನಲ್ ಕೇಸ್ ದಾಖಲಿಸಿ ಕರ್ನಾಟಕಕ್ಕೆ ಬರದಂತೆ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ, ರಾಷ್ಟ್ರೀಯ ಬಸವದಳ ಜಿಲ್ಲಾಧ್ಯಕ್ಷ ಸೋಮಶೇಖರ ಗಾದಗಿ, ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಕುಶಾಲರಾವ ಪಾಟೀಲ್, ಪ್ರಮುಖರಾದ ಜೈರಾಜ ಖಂಡ್ರೆ, ಬಸವರಾಜ ಬುಳ್ಳಾ, ಶ್ರೀಕಾಂತ ಸ್ವಾಮಿ, ಧನರಾಜ ಹಂಗರಗಿ, ಸಂಜುಕುಮಾರ ಪಾಟೀಲ್, ಯೋಗೇಂದ್ರ ಯದಲಾಪುರ, ವಿಲಾಸ ಪಾಟೀಲ್, ಸಿದ್ದು, ಶೆಟಕಾರ, ಗಣೇಶ ಬಿರಾದಾರ್, ಶ್ರೀನಾಥ ಕೋರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net