

ಬೀದರ್: ಏಕ್ ಲಾಖ್ ಪೇಡ್ ಮಾ ಕೇ ನಾಮ್ ಅಭಿಯಾನ ಅಂಗವಾಗಿ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಅವರು ನವದೆಹಲಿಯಲ್ಲಿ ಶನಿವಾರ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಿಲ್ವಪತ್ರಿ ಸಸಿ ವಿತರಿಸಿದರು.
ಶ್ರೀಶೈಲದ ಅಕ್ಕ ಮಹಾದೇವಿ ಚೈತನ್ಯ ಪೀಠದ ಅಧಿಪತಿ ಮಾತೆ ಕರುಣಾದೇವಿ ಅವರ ಹೆಸರಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ದೇಶದಾದ್ಯಂತ ಈಗಾಗಲೇ ಬಿಲ್ವಪತ್ರಿ ಸೇರಿದಂತೆ 98 ಸಾವಿರ ವಿವಿಧ ಸಸಿಗಳನ್ನು ವಿತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಎಲ್ಲೆಡೆ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಾಗಿ ಅಭಿಯಾನದ ಶ್ರಮ ಸಾರ್ಥಕವಾಗಿದೆ. ಶೀಘ್ರದಲ್ಲೇ ಅಭಿಯಾನದ ಸಮಾರೋಪ ಸಮಾರಂಭ ಆಯೋಜಿಸಲಾಗುವುದು ಎಂದು ತಿಳಿಸಿದರು.
ಶಿವಯ್ಯ ಸ್ವಾಮಿ ಅವರು ಗುರುವಿನ ಹೆಸರಲ್ಲಿ ಪರಿಸರ ಕಾಳಜಿಯ ಅಭಿಯಾನ ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಬಿಲ್ವಪತ್ರಿ ಸಸಿಗೆ ಮಹತ್ವದ ಸ್ಥಾನವಿದೆ. ಸಸಿಯನ್ನು ತಮ್ಮ ಕಚೇರಿಯಲ್ಲಿ ನೆಡಲಾಗುವುದು ಎಂದು ತಿಳಿಸಿದರು.
ಪ್ರಮುಖರಾದ ಅರುಣ್ ಉಪಾಧ್ಯಾಯ, ಸೋಮವೀರ ಬೆನಿವಾಲ್, ಅಲ್ಕಾ ಚೌಧರಿ, ಬಲರಾಜ ಗೌತಮ್ ಮತ್ತಿತರರು ಇದ್ದರು.
ಬೀದರ್‍ನ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ, ಶ್ರೀ ಜಗದ್ಗುರು ಪಂಚಾಚಾರ್ಯ ಯುವಕ ಸಂಘ, ಶ್ರೀಶೈಲದ ಅಕ್ಕ ಮಹಾದೇವಿ ಚೈತನ್ಯ ಕೇಂದ್ರ, ನೌಬಾದ್‍ನ ಜ್ಞಾನಶಿವಯೋಗಾಶ್ರಮ, ಈಶ್ವರಿ ಮಹಿಳಾ ಮಂಡಳ ಹಾಗೂ ಆರತಿ ಮಹಿಳಾ ವಿಕಾಸ ಸಮಿತಿಯಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ.