ಸರ್ಕಾರ ಆದೇಶ ಹಿಂಪಡೆಯಲು ಆಗ್ರಹ

Revansiddappa Jalade
Published on

ಬೀದರ್: ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಗೆ ಶೇ 33 ರಷ್ಟು ಅಂಕ ನಿಗದಿಪಡಿಸಿ ಸರ್ಕಾರ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಅಖಿಲ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ರಾಜ್ಯ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಆಗ್ರಹಿಸಿದ್ದಾರೆ.

ಫಲಿತಾಂಶ ಹೆಚ್ಚಳಕ್ಕಾಗಿ ಸರ್ಕಾರ ತೇರ್ಗಡೆ ಅಂಕ ಶೇ 35 ರಿಂದ ಶೇ 33 ಕ್ಕೆ ಇಳಿಸಿರುವುದು ಅವೈಜ್ಞಾನಿಕ ಎಂದು ಟೀಕಿಸಿದ್ದಾರೆ.

ಸದ್ಯ ಸ್ಪರ್ಧಾತ್ಮಕ ಯುಗ ಇದೆ. ಎಲ್ಲದರಲ್ಲೂ ಸ್ಪರ್ಧೆ ಇದೆ. ಶೇ 33 ರಷ್ಟು ಅಂಕ ಪಡೆದು ತೇರ್ಗಡೆಯಾಗುವ ವಿದ್ಯಾರ್ಥಿಗಳು ಸ್ಪರ್ಧೆಯನ್ನು ಎದುರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

100 ಅಂಕಗಳ ಪೈಕಿ ಶಾಲೆಯವರ ಬಳಿ 20 ಆಂತರಿಕ ಅಂಕಗಳು ಇವೆ. ಸರ್ಕಾರದ ಹೊಸ ಆದೇಶದಿಂದ ಉಳಿದ 80 ಅಂಕಗಳ ಪೈಕಿ 13 ಅಂಕ ಪಡೆದರೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿದ್ದಾರೆ. ಹೀಗೆ ಪಾಸಾಗುವ ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿ ಪರ ಕೋರ್ಸ್‍ಗಳಿಗೆ ಅರ್ಹತೆ ಗಳಿಸಲು ಸಾಧ್ಯವೇ. ಇದರಿಂದ ಶೈಕ್ಷಣಿಕ ಗುಣಮಟ್ಟ ಕುಸಿಯಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ತೇರ್ಗಡೆಗೆ ನಿಗದಿ ಮಾಡಲಾದ ಶೇ 33 ಅಂಕ ಮಕ್ಕಳ ಉನ್ನತಿ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಮಾರಕವಾಗಲಿದೆ. ಕಾರಣ, ಸರ್ಕಾರ ಕೂಡಲೇ ತನ್ನ ಆದೇಶವನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net