

ಬೀದರ್: ನೋಂದಾಯಿತ ಕಾರ್ಮಿಕರ ಗುರುತಿನ ಚೀಟಿಯ ಮಾನ್ಯತೆ ಅವಧಿಯನ್ನು ಮೂರು ವರ್ಷಕ್ಕೆ ವಿಸ್ತರಿಸಬೇಕು ಎಂದು ಜಿಲ್ಲಾ ಬಿದರಿ ಕರ್ನಾಟಕ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘ ಆಗ್ರಹಿಸಿದೆ.
ಸಂಘದ ಪದಾಧಿಕಾರಿಗಳು ನಗರಕ್ಕೆ ಮಂಗಳವಾರ ಭೇಟಿ ನೀಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಸದ್ಯ ಗುರುತಿನ ಚೀಟಿಯ ಮಾನ್ಯತೆ ಅವಧಿ ಒಂದು ವರ್ಷ ಆಗಿದೆ. ಹೀಗಾಗಿ ವರ್ಷಕ್ಕೊಮ್ಮೆ ಮಾನ್ಯತೆ ನವೀಕರಣ ಮಾಡಬೇಕಾಗಿದೆ. ಮಾನ್ಯತೆ ಅವಧಿ ವಿಸ್ತರಿಸಿದರೆ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ಗಮನ ಸೆಳೆದರು.
ಸಂಘದ ಗೌರವಾಧ್ಯಕ್ಷ ಡಾ. ತಾನಾಜಿ ಸಗರ್, ಅಧ್ಯಕ್ಷ ಅಭಿಮಾನ್ ಕಾಂಬಳೆ, ಪ್ರಧಾನ ಕಾರ್ಯದರ್ಶಿ ಶಾಂತಕುಮಾರ ಶ್ರೀಮಂಗಲೆ, ಬೀದರ್ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಟಿಳೆಕರ್, ಪ್ರಮುಖರಾದ ಮಂಜು ಹುಲಸೂರೆ, ಶಿವಕುಮಾರ ಶಹಾಪುರೆ ಮತ್ತಿತರರು ಇದ್ದರು.