

ಬೀದರ್: ಕನ್ನಡ ಕೇವಲ ಭಾಷೆಗೆ ಸೀಮಿತವಾಗಿರದೆ ನಮ್ಮ ಬದುಕಿನ ಮೂಲ ಬೇರಾಗಿದೆ ಎಂದು ಖ್ಯಾತ ಹಾಸ್ಯ ಕಲಾವಿದ ಪ್ರೊ.ಕೃಷ್ಣೇಗೌಡ ಹೇಳಿದರು.
ನಗರದ ಡಾ.ಅಂಬೇಡ್ಕರ್ ವೃತ್ತ ಹತ್ತಿರದ ಕರ್ನಾಟಕ ಸಾಹಿತ್ಯ ಸಂಘದ ಅವರಣದಲ್ಲಿ ಏರ್ಪಡಿಸಿದ್ದ ಸಾಹಿತಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ನಮ್ಮ ಸರ್ವಸ್ವ. ನಾನು ವಿದೇಶಕ್ಕೆ ಹೋದರೂ ಕನ್ನಡವನ್ನು ಆಸ್ವಾದಿಸುವ ಸಂದರ್ಭ ಒದಗಿ ಬಂದಿರುವುದು ಪುಣ್ಯ. ಮಾತೃಭಾಷೆ ಭಾವಕೋಶ ಮತ್ತು ಬುದ್ಧಿಕೋಶವನ್ನು ಅಭಿವೃದ್ಧಿಗೊಳಿಸುತ್ತದೆ ಎಂದರು.
ಪ್ರಸ್ತುತ ಎಐ ತಂತ್ರಜ್ಞಾನ ಮನುಷ್ಯನಿಗೆ ಹಲವಾರು ಮಾರ್ಗೋಪಾಯ ಕಲ್ಪಿಸುತ್ತಿರುವ ಕಾರಣ ಸೋಮಾರಿ ಆಗುತ್ತಿರುವುದು ದರಂತವೇ ಸರಿ. ನಮ್ಮ ಬುದ್ಧಿಮತ್ತೆಗೆ ಕೆಲಸ ಕೊಡದೆ ಎಲ್ಲವೂ ತಂತ್ರಜ್ಞಾನದ ಮೇಲೆ ನಿರ್ಭರವಾಗುತ್ತಿದ್ದೇವೆ. ಗೂಗಲ್ ಮ್ಯಾಪ್ ನಮಗೆ ಮರುಹು ಹೆಚ್ಚಿಸಿದೆ. ಅತಿಯಾದ ಮೊಬೈಲ್ ಬಳಕೆ, ದೂರವಾಣಿ ಸಂಖ್ಯೆಗಳನ್ನು ಮರೆತು ಹೋಗುವಂತೆ ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಐಷಾರಾಮಿ ವಾಹನಗಳಲ್ಲಿ ಓಡಾಡುತ್ತಿರುವುದರಿಂದ ಏಕಾಂಗಿತನ ಜಾಸ್ತಿಯಾಗಿ ಕಮ್ಯುನಿಕೇಷನ್ ಕಡಿಮೆಯಾಗಿದೆ. ಶಬ್ದರಹಿತ ಕಿಟಕಿಗಳನ್ನು ನಿರ್ಮಿಸಿ ಹೊರಗಿನಿಂದ ಬರುವ ನಾಯಿ, ಬೆಕ್ಕು, ಪಕ್ಷಿ ಇತರ ಪ್ರಾಣಿಗಳ ಶಬ್ದ ಕೇಳದೆ ಮೌನ ಅನುಭವಿಸುತ್ತಿದ್ದೇವೆ. ದೊಡ್ಡ ಬಂಗಲೆ ನಿರ್ಮಿಸಿ ಸೂರ್ಯೋದಯ ಹಾಗೂ ಸೂರ್ಯಾಸ್ತವೇ ನೋಡದಂಥ ಪರಿಸ್ಥಿತಿ ನಮ್ಮದಾಗಿದೆ ಎಂದರು.
ಸಾಹಿತಿಗಳಾದ ಪ್ರೊ.ಪ್ರಭುಶೆಟ್ಟಿ ಮೂಲಗೆ, ಶಾಂತಕುಮಾರ ಪಾಟೀಲ್, ವೀರಭದ್ರಪ್ಪ ಉಪ್ಪಿನ್, ಮಲ್ಲಿಕಾರ್ಜುನ ಪ್ರಭಾ, ಜಗನ್ನಾಥ ಪಾರಾ, ದೇವಿದಾಸ ಜೋಶಿ, ಡಾ.ಸಾವಿತ್ರಿಬಾಯಿ ಹೆಬ್ಬಾಳೆ, ಶಾಂತಮ್ಮ ಬಲ್ಲೂರ, ಅಶೋಕ ಕೋರೆ, ಶಿವಶರಣಪ್ಪ ಗಣೇಶಪುರ, ಪ್ರಕಾಶ ಕನ್ನಾಳೆ ಇತರರಿದ್ದರು.
ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿದರು. ರಾಷ್ಟ್ರೀಯ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಪ್ರಾಧ್ಯಾಪಕಿ ಡಾ.ಸುನೀತಾ ಕೂಡ್ಲಿಕರ್ ನಿರೂಪಣೆ ಮಾಡಿದರು.