

ಬೀದರ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಚುನಾವಣೆ ಘೋಷಣೆಯಾಗಿದ್ದು, ನ.9ರಂದು ಮತದಾನ ನಡೆಯಲಿದೆ.
ಪಾರದರ್ಶಕ, ಕಾನೂನುಬದ್ಧವಾಗಿ ಚುನಾವಣೆ ಪ್ರಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಡೀ ಪ್ರಕ್ರಿಯೆ ವಿಡಿಯೋ ಚಿತ್ರಿಕರಣ ಮಾಡಲಾಗುತ್ತದೆ. ಜಿಲ್ಲಾ ಚುನಾವಣಾ ಅಧಿಕಾರಿ ಕಚೇರಿಯನ್ನು ವಾರ್ತಾ ಮತ್ತು ಸಾವರ್ಜನಿಕ ಸಂಪರ್ಕ ಇಲಾಖೆ ಕಚೇರಿ ಮೊದಲ ಮಹಡಿಯಲ್ಲಿ ಸ್ಥಾಪಿಸಲಾಗಿದೆ. ಚುನಾವಣೆಯ ಎಲ್ಲ ಪ್ರಕ್ರಿಯೆ ಕಚೇರಿಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶಶಿಕಾಂತ ಎಸ್.ಶೆಂಬೆಳ್ಳಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮತದಾರರ ಕರಡು ಪಟ್ಟಿ ಪ್ರಕಟಿಸಲಾಗಿದೆ. ಅ.16ರಂದು ಮತಪಟ್ಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನ. 18ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ, 19ರಿಂದ 27ರವ್ರೆಗೆ ನಾಮಪತ್ರ ಸಲ್ಲಿಕೆ, 28ಕ್ಕೆ ಪರಿಶೀಲನೆ, 30 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಅಂದೇ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ನ.9ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಅಗತ್ಯ ಬಿದ್ದಲ್ಲಿ ಮತದಾನ, ಮಧ್ಯಾಹ್ನ 3.30ರ ನಂತರ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಿಸಲಾಗುವುದು. ಅ.20ರಿಂದ 22ರವರೆಗೆ ದೀಪಾವಳಿ ಹಬ್ಬದ ಪ್ರಯುಕ್ತ ರಜೆ ಇದೆ ಎಂದು ತಿಳಿಸಿದರು.
ಪ್ರತಿದಿನ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಚುನಾವಣಾ ಕಚೇರಿ ತೆರೆದಿರುತ್ತದೆ. ಚುನಾವಣೆಗೆ ಸಂಬಂಧಿಸಿದಂತೆ ಯಾವುದಾದರೂ ಮಾಹಿತಿ ಬೇಕಿದ್ದಲ್ಲಿ ನೇರವಾಗಿ ಕಚೇರಿಗೆ ಬಂದು ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಬೇಕು. ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಎಲ್ಲರೂ ಸಹಕಾರ ಕೊಡಬೇಕು ಎಂದು ಹೇಳಿದರು.
ನೋಡಲ್ ಅಧಿಕಾರಿಗಳಾದ ಮಹೇಶ ಕುಲಳ್ಳಿ, ವಿಜಯಕೃಷ್ಣ, ಸಹಾಯಕ ಚುನಾವಣಾಧಿಕಾರಿಗಳಾದ ಮಹಾರುದ್ರ ಡಾಕುಳಗಿ, ಸತ್ಯಜೀತ್ ಇದ್ದರು.