ಬಿತ್ತನೆ ಬೀಜದ ಕೊರತೆಯಾಗದಿರಲಿ

Kamalnagar 1
Published on

ಕಮಲನಗರ: ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ದರ ಸರಿಯಾಗಿ ಕಾಣುವಂತೆ ಪ್ರದರ್ಶಿಸಬೇಕು. ನಿಗದಿಗಿಂತ ಹೆಚ್ಚಿನ ಹಣ ಪಡೆಯುವಂತಿಲ್ಲ. ರೈತರು ಸಂಕಷ್ಟದಲ್ಲಿದ್ದು, ಸೌಜನ್ಯದಿಂದ ಮಾತನಾಡಿಸಿ ಬೀಜದ ಕೊರತೆಯಾಗದಂತೆ ಕ್ರಮ ವಹಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಮುಂಗಾರು ಹಂಗಾಮಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿ ಸಾಕಷ್ಟು ಬೆಳೆ ನಷ್ಟವಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಹಿಂಗಾರಿನಲ್ಲಾದರೂ ರೈತರಿಗೆ ಲಾಭ ಸಿಗಲಿ ಎಂದು ಆಶಿಸಿದರು.

ಅತಿವೃಷ್ಟಿಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲೇ ಔರಾದ್ ಮತ್ತು ಕಮಲನಗರ ತಾಲೂಕುಗಳಲ್ಲಿ ಹೆಚ್ಚು ಹಾನಿ ಸಂಭವಿಸಿದೆ. ಉದ್ದು, ಹೆಸರು, ಜೋಳ, ಸೋಯಾಬೀನ್, ತೊಗರಿ ಸೇರಿ ಎಲ್ಲ ಬೆಳೆಗಳು ಸಂಪೂರ್ಣ ನಾಶವಾಗಿವೆ. ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ರೈತರಿಗೆ ಅನ್ಯಾಯವಾಗಿದೆ ಎಂದರು.

ಕಷ್ಟದಲ್ಲಿರುವ ರೈತರಿಗೆ ಸ್ಪಂದಿಸಬೇಕಾದ ಸರ್ಕಾರ ಕಣ್ಮುಚ್ಚಿ ಕುಳಿತಂತೆ ಕಾಣುತ್ತಿದೆ. ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಸಚಿವರು ಭೇಟಿ ನೀಡಿ ರೈತರ ಸಮಸ್ಯೆ ಕೇಳಿಲ್ಲ. ಮುಖ್ಯಮಂತ್ರಿ ಕಾಟಾಚಾರದ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ದೀಪಾವಳಿ ಹಬ್ಬಕ್ಕೂ ಮುನ್ನ ಸರ್ಕಾರ ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರ ಬಿಡುಗಡೆ ಮಾಡಬೇಕು ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಮಾತನಾಡಿ, ಔರಾದ್ ಹಾಗೂ ಕಮಲನಗರ ತಾಲೂಕುಗಳಿಗೆ ಅಗತ್ಯವಿರುವಷ್ಟು ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. ರೈತರಿಗೆ ವಿತರಿಸಲು ಎಲ್ಲ ರೈತ ಸಂಪರ್ಕ ಕೇಂದ್ರಗಳು ಸಜ್ಜುಗೊಂಡಿವೆ. ಬೇಡಿಕೆ ಬಂದಲ್ಲಿ ಹೆಚ್ಚುವರಿ ಬೀಜ ತರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಕೃಷಿ ಅಧಿಕಾರಿ ಆನಂದ ಹಮಲಾಪುರೆ, ಪ್ರಮುಖರಾದ ಮಲ್ಲಿಕಾರ್ಜುನ ದಾನಾ, ಕಿರಣ ಪಾಟೀಲ್, ಬಾಬುರಾವ ತೋರ್ಣಾವಾಡಿ, ಶಿವಾನಂದ ವಡ್ಡೆ, ನಾಗೇಶ ಪತ್ರೆ, ಬಸವರಾಜ ಪಾಟೀಲ್, ರಾಜಕುಮಾರ ಅಲಬಿದೆ, ಪ್ರದೀಪ್ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net