

ಬೀದರ್: ಸಮಯದ ಸದ್ಬಳಕೆಯಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎ ಹಾಗೂ ಬಿ.ಸಿ.ಎ. ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ 2025-26ನೇ ಸಾಲಿನ ಕಾಲೇಜಿನ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಾವ ಸಮಯದಲ್ಲಿ ಏನನ್ನು ಮಾಡಬೇಕೋ ಅದನ್ನು ಮೊದಲು ಮಾಡಬೇಕು. ವಿದ್ಯಾರ್ಥಿಗಳು ಓದಿಗೆ ಸ್ವಯಂ ವೇಳಾ ಪಟ್ಟಿ ಹಾಕಿಕೊಳ್ಳಬೇಕು. ಏಕಾಗ್ರತೆಯಿಂದ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಪಠ್ಯಕ್ರಮದ ಜತೆಗೆ ಜ್ಞಾನ ವೃದ್ಧಿಗೆ ಅತ್ಯಾಧುನಿಕ ಕಲಿಕಾ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು. ಸನ್ನಡತೆ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಶಾರದಾ ಮಾಳಗೆ ಮಾತನಾಡಿ, ಮನಸ್ಸಿದ್ದಲ್ಲಿ ಮಾರ್ಗವಿದೆ. ವಿದ್ಯಾರ್ಥಿಗಳು ಪರಿಶ್ರಮ ವಹಿಸಿದರೆ ಏನನ್ನು ಬೇಕಾದರೂ ಸಾಧಿಸಬಹುದು. ಕೆಎಎಸ್‍ನಲ್ಲಿ ತೇರ್ಗಡೆಯಾದ ನಾನೇ ಇದಕ್ಕೆ ನಿದರ್ಶನ ಎಂದು ತಿಳಿಸಿದರು.
ಸಾಧನೆಯತ್ತ ಹೆಜ್ಜೆ ಇಡಲು ವಿದ್ಯಾರ್ಥಿಗಳು ಓದಿನತ್ತ ಗಮನ ಕೇಂದ್ರೀಕರಿಸಬೇಕು. ಮೊಬೈಲ್‍ನಿಂದ ದೂರವಿರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಶಂಕರ ಕೆ. ಗಣಗೊಂಡ ಮಾತನಾಡಿ, ವಿದ್ಯಾರ್ಥಿಗಳು ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಪರಿಶ್ರಮ ವಹಿಸಿ ವ್ಯಾಸಂಗ ಮಾಡುವ ಮೂಲಕ ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಅಮರೆಪ್ಪ, ಪ್ರೊ. ಅಶೋಕ್ ಪಾಟೀಲ, ಸೂರ್ಯಕಾಂತ್ ಸಾಧುರೆ
ಕಾಲೇಜಿನ ಸಿಬ್ಬಂದಿ ಕಾರ್ಯದರ್ಶಿ ಡಾ. ರಾಜಕುಮಾರ ಅಲ್ಲೂರೆ, ಡಾ.ಎಲಿಷ ದೇವಿದಾಸ, ದೈಹಿಕ ಶಿಕ್ಷಣ ನಿರ್ದೇಶಕ ಬಾಲಸುಬ್ರಹ್ಮಣ್ಯ ಚಾಲಾಕ್ ಉಪಸ್ಥಿತರಿದ್ದರು. ವೈಭವಿ, ಯಶಸ್ವಿ ನಿರೂಪಿಸಿದರು. ಶಿವಾನಿ ವಂದಿಸಿದರು.