

ಬೀದರ್: ಬೀಜಗ್ರಾಮ ಯೋಜನೆಯಡಿಯಲ್ಲಿ ರೈತರಿಗೆ ಗುಣಮಟ್ಟದ ಬೀಜ ವಿತರಣೆ ಮಾಡುತ್ತಿರುವ ರಾಯಚೂರು ಕೃಷಿ ವಿಶ್ವವಿದ್ಯಾಲಯ ಕಾರ್ಯ ಶ್ಲಾಘನೀಯ. ಈ ಯೋಜನೆಯನ್ನು ಬೀದರ್ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ವಿಸ್ತರಣೆ ಮಾಡಬೇಕು ಹಾಗೂ ಈ ಬಗ್ಗೆ ಅನ್ನದಾತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಹೇಳಿದರು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಬೀಜ ಘಟಕ ಹಾಗೂ ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ ವತಿಯಿಂದ ನಗರದ ಹೊರವಲಯದ ಚಿಕ್ಕಪೇಟ್ ಬಳಿಯ ಹೆಬ್ಬಾಳೆ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸ್ವಾವಲಂಬಿ ಬೀಜೋತ್ಪಾದನೆ ಕುರಿತು ರೈತರಿಗಾಗಿ ಆಯೋಜಿಸಿದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಪ್ರತಿ ತಾಲೂಕಿಗೆ ಅಂದಾಜು 200 ಹೆಕ್ಟೇರ್ಗೆ ಸಾಕಾಗುವಷ್ಟು ಬೀಜ ವಿತರಣೆ ಮಾಡುವ ಅವಶ್ಯಕ ಇದೆ. ಪ್ರತಿ ವರ್ಷ 10 ಹಳ್ಳಿಗಳಿಗೆ ಹೆಚ್ಚುವರಿಯಾಗಿ ಬೀಜ ವಿತರಣೆ ಮಾಡಿದಾಗ ರೈತರಲ್ಲಿ ಧೈರ್ಯ ಬರುತ್ತದೆ. ರಾಯಚೂರು ವಿಶ್ವವಿದ್ಯಾಲಯ ಗುಣಮಟ್ಟದ ಬೀಜ ಕುರಿತು ಪ್ರತಿ ಹಳ್ಳಿಗೆ ಹೋಗಿ ಈ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಇದ್ದರೂ ಸಿಬ್ಬಂದಿ ಕೊರತೆ ಕಾರಣ ಕೆಲಸಗಳಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ರೈತರು ಬೀಜದ ತಳಿ ಬೆಳೆಸಿ ಸರ್ಕಾರದ ಮೇಲೆ ಅವಲಂಬಿತರಾಗದೆ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.
ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ. ಪಾಟೀಲ್ ಮಾತನಾಡಿ, ಈ ಬಾರಿ ಅತಿವೃಷ್ಟಿಯಿಂದ ಸಾಕಷ್ಟು ಬೆಳೆಗಳು ಹಾನಿಯಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಕೃಷಿಯಲ್ಲಿ ಹೊಸತನ ಅಳವಡಿಸಿಕೊಂಡು ರೈತರು ಸಹ ಉದ್ಯಮಿಗಳಾಗಬೇಕು. ರೈತರು ಯಾವ ಕಾರಣಕ್ಕೂ ಕುಗ್ಗಬಾರದು. ನಾಳೆ ಎನ್ನದೆ ಇಂದಿನ ಕಾರ್ಯ ಇಂದೇ ಮಾಡಿಮುಗಿಸಬೇಕು ಎಂದು ಹೇಳಿದರು.
ರಾಯಚೂರು ಕೃಷಿ ವಿವಿ ಕೃಷಿ ಕೀಟಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎ.ಜಿ. ಶ್ರೀನಿವಾಸ ವಿಶೇಷ ಉಪನ್ಯಾಸ ನೀಡಿದರು. ವಿವಿಯ ಸಂಶೋಧನಾ ಮತ್ತು ವಿಸ್ತೀರ್ಣ ನಿರ್ದೇಶಕ ಡಾ.ಅಮರೆಗೌಡ ಎ. ಅಧ್ಯಕ್ಷತೆ ವಹಿಸಿದ್ದರು.
ಕೃಷಿ ವಿಶ್ವವಿದ್ಯಾಲಯದ ಬೀಜ ಘಟಕದ ವಿಶೇಷಾಧಿಕಾರಿ ಡಾ.ಅರುಣಕುಮಾರ ಹೊಸಮನಿ ಮಾತನಾಡಿ, ರಾಜ್ಯದಲ್ಲಿ ಐದು ಕೃಷಿ ವಿವಿಗಳಿವೆ. ಅದರಲ್ಲಿ ರಾಯಚೂರು ವಿಶ್ವವಿದ್ಯಾಲಯ ಗುಣಮಟ್ಟದ ಬೀಜ ಉತ್ಪಾದನೆ ಮಾಡುತ್ತಿದೆ. ರಾಯಚೂರಿಗೆ ಮಾತ್ರ ಸೀಮಿತವಿದ್ದ ಕಡಲೆ ಬೀಜವನ್ನು ಈ ಬಾರಿ ಬೀದರ್ ಜಿಲ್ಲೆ ರೈತರಿಗೆ ವಿತರಣೆ ಮಾಡುತ್ತಿದ್ದೇವೆ. ಈ ಬೀಜದಲ್ಲಿ ನೆಟೆ ರೋಗ ತಡೆದುಕೊಳ್ಳುವ ಮತ್ತು ರೋಗ ನಿರೋಧಕ ಶಕ್ತಿಯಿದೆ ಎಂದು ಹೇಳಿದರು.
ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ, ಡಾ.ಬಿ.ಎನ್. ದೊಡ್ಡಮನಿ, ಅಶೋಕ ಹೆಬ್ಬಾಳೆ, ಡಾ.ವಿಜಯಕುಮಾರ ಕುರನಳ್ಳಿಕರ್, ಡಾ.ಸುನೀಲಕುಮಾರ ಎಂ., ಡಾ.ಸಿದ್ರಾಮಪ್ಪ, ಡಾ.ಬಸವರಾಜ ಬಿರಾದಾರ್, ಮೋಹನ ಬಾಬು, ಡಾ.ಸುನೀಲಕುಮಾರ ಎನ್.ಎಂ., ಡಾ.ಜ್ಞಾನದೇವ ಇತರರಿದ್ದರು. ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥೆ ಡಾ.ಭವಾನಿ ಕೆ. ಸ್ವಾಗತಿಸಿದರು. ಡಾ.ನಿಂಗದಳ್ಳಿ ಮಲ್ಲಿಕಾರ್ಜುನ ನಿರೂಪಣೆ ಮಾಡಿದರು. ಡಾ.ಉಮೇಶ ಬಾರಿಕಾರ ವಂದಿಸಿದರು.