ಹವಾಮಾನಕ್ಕೆ ಹೊಂದಿಕೊಳ್ಳುವ ಪಶು ಉತ್ಪಾದನೆ ಅಗತ್ಯ

Pasu Vv
Published on

ಬೀದರ್: ಹವಾಮಾನ ಬದಲಾವಣೆಗಳಿಗೆ ಹೊಂದಿಕೊಳ್ಳುವಂಥ ಪಶು ಉತ್ಪಾದನೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ ಎಂದು ಕರ್ನಾಟಕ ಪಶು, ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ಹೇಳಿದರು.

ನಗರದ ಹೊರವಲಯದಲ್ಲಿರುವ ಪಶು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ ರಾಷ್ಟ್ರೀಯ ಪಶು ವೈದ್ಯಕೀಯ ಶರೀರ ಕ್ರಿಯಾ ಶಾಸ್ತ್ರಜ್ಞರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಹವಾಮಾನ ಬದಲಾವಣೆ, ಉತ್ಪಾದನೆ ಒತ್ತಡದಿಂದ ಪಶುಸಂಪನ್ಮೂಲ ಕ್ಷೇತ್ರವು ಸವಾಲಿನ ಹಾದಿಯಲ್ಲಿದೆ. ಇಂಥ ಪರಿಸ್ಥಿತಿಯಲ್ಲಿ ಸಂಶೋಧನೆ, ವಿಜ್ಞಾನಾಧಾರಿತ ನಿರ್ವಹಣಾ ಕ್ರಮ ಮತ್ತು ಸ್ಥಳೀಯ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದರು.

ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವ ಪಶು ಜಾತಿಗಳ ಸಂರಕ್ಷಣೆ, ಉತ್ತೇಜನ ಮತ್ತು ನಿರ್ವಹಣೆಯ ತರಬೇತಿ ಮತ್ತು ಜಾಗೃತಿ ಮೂಡಿಸಬೇಕಾಗಿದೆ. 2050ರ ವೇಳೆಗೆ 7.2 ಬಿಲಿಯನ್ ನಿಂದ 9.6 ಬಿಲಿಯನ್ ವರೆಗೆ ಜಗತ್ತಿನ ಜನ ಸಂಖ್ಯೆ ಏರಿಕೆಯಾಗಲಿದೆ. ಆಗ ಆಹಾರ ಮತ್ತು ಕೃಷಿ ಉತ್ಪನ್ನಗಳ ಬೇಡಿಕೆ ಶೇ.70ರಷ್ಟು ಹೆಚ್ಚಾಗಲಿದ್ದು, ಆಹಾರ ಮತ್ತು ದೇಶದ ಆರ್ಥಿಕತೆಯಲ್ಲಿ ಪಶುಸಂಪನ್ಮೂಲ ಕ್ಷೇತ್ರ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಹೇಳಿದರು.

ಸಮ್ಮೇಳನದ ಆಯೋಜನ ಕಾರ್ಯದರ್ಶಿ ಡಾ.ಶ್ರೀಕಾಂತ ಕುಲಕರ್ಣಿ ಮಾತನಾಡಿ, ಸಮ್ಮೇಳನವು ಹವಾಮಾನ ಬದಲಾವಣೆ ಎದುರಿಸಲು ಪಶು ಉತ್ಪಾದನಾ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಜ್ಞಾನ ವಿನಿಮಯಕ್ಕೆ ವೇದಿಕೆಯಾಗಿದೆ ಎಂದು ಹೇಳಿದರು.

ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಎಂ.ಕೆ. ತಾಂದಳೆ ಅಧ್ಯಕ್ಷತೆ ವಹಿಸಿದ್ದರು. ಪಶು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಬಸವರಾಜ ಭತಮುಗರ್ೆ, ಕುಲಸಚಿವ ಡಾ.ಪಿ.ಟಿ. ರಾಮೇಶ್, ಪ್ರಾಣಿ ಶರೀರ ಶಾಸ್ತ್ರಜ್ಞರ ಸಂಘದ ಅಧ್ಯಕ್ಷ ಡಾ.ಗ್ಯಾನೇಂದ್ರಸಿಂಗ್, ಕನರ್ಾಟಕ ಪಶುವೈದ್ಯರ ಸಂಘದ ಅಧ್ಯಕ್ಷ ಡಾ.ಎಸ್.ಜಿ. ಯಲಗೋಡ, ಡಾ. ಜಿ.ಶರ್ಮಾ, ವಿಷ್ಣುವರ್ಧನ್ ರಾಂಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net