ಚವ್ಹಾಣ್ ಪ್ರಯತ್ನದಿಂದ ಪುರಸಭೆಯಾಗಿ ಮೇಲ್ದರ್ಜೆಗೆ

Chavan Sanman
Published on

ಔರಾದ್: ಔರಾದ್ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ನಿರ್ಣಯಿಸಿರುವ ಹಿನ್ನೆಲೆಯಲ್ಲಿ ಶಾಸಕ ಪ್ರಭು ಚವ್ಹಾನ್ ಅವರನ್ನು ಸನ್ಮಾನಿಸಲಾಯಿತು.

ಪಪಂ ಅಧ್ಯಕ್ಷೆ ಸರುಬಾಯಿ ಘೂಳೆ ಹಾಗೂ ಸದಸ್ಯರು ಶುಕ್ರವಾರ ಪಟ್ಟಣದಲ್ಲಿ ಶಾಸಕರನ್ನು ಸನ್ಮಾನಿಸಿ ಮಾತನಾಡಿ, ಪಟ್ಟಣದ ಸಮಗ್ರ ಅಭಿವೃದ್ಧಿ ಕನಸನ್ನು ಹೊತ್ತುಕೊಂಡು ಚವ್ಹಾಣ್ ಕೆಲಸ ಮಾಡುತ್ತಿದ್ದಾರೆ. ಅವರ ನಿರಂತರ ಶ್ರಮದಿಂದ ಇದೀಗ ಪುರಸಭೆಯಾಗಿ ಮೇಲ್ದರ್ಜೆಗೇರಿದೆ ಎಂದು ಹೇಳಿದರು.

ಸರ್ಕಾರಕ್ಕೆ ಅನೇಕ ಬಾರಿ ಪತ್ರಗಳನ್ನು ಬರೆದಿದ್ದಾರೆ. ಮುಖ್ಯಮಂತ್ರಿ, ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಶಾಸಕ ಚವ್ಹಾಣ್ ಅವರು ಭೇಟಿಯಾಗಿ ಪುರಸಭೆಯಾಗಿಸುವ ಅನಿವಾರ್ಯತೆ ಎಷ್ಟಿದೆ ಎನ್ನುವ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅವರ ಸತತ ಪ್ರಯತ್ನ ವಹಿಸಿರುವ ಕಾರಣ ಸರ್ಕಾರವು ಇದೀಗ ನಿರ್ಣಯಿಸಿದೆ ಎಂದರು.

ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ರೂಪಿಸಿರುವ ಮಾಸ್ಟರ್ ಪ್ಲ್ಯಾನ್ ಗೆ ಮಂಜೂರು ಮಾಡಿಸಿದ್ದಾರೆ. ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಶಾಸಕರು ಒದಗಿಸಿದ್ದು, ಪ್ರಮುಖ ಬೀದಿಗಳಲ್ಲಿ ಸುಂದರ ವಿದ್ಯುತ್ ದೀಪಗಳನ್ನು ಅಳವಡಿಸಿ ಪಟ್ಟಣದ ಸೌಂದರ್ಯ ಹೆಚ್ಚಿಸಿದ್ದಾರೆ. ಟ್ರೀ ಪಾಕ್೯ ನಿರ್ಮಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗುತ್ತಿವೆ. ಪುರಸಭೆಯಾದ ನಂತರ ಸರ್ಕಾರದಿಂದ ಹೆಚ್ಚಿನ ಅನುದಾನ ಬರಲಿದ್ದು, ಸಾರ್ವಜನಿಕರಿಗೂ ಸಾಕಷ್ಟು ಅನುಕೂಲಗಳಾಗಲಿವೆ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಧೊಂಡಿಬಾ ನರೋಟೆ, ಗುಂಡಪ್ಪ ಮುಧಾಳೆ, ಮುಖಂಡ ಕೇರಬಾ ಪವಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net