ಖಾಸಗಿ ಶಿಕ್ಷಣ ಸಂಸ್ಥೆ ಸಂಘದ ವಿಶೇಷ ಸಭೆ 12ರಂದು

Revansiddappa Jalade-1 - Copy
????????????????????????????????????
Published on

ಬೀದರ್: ಅಖಿಲ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ರಾಜ್ಯಮಟ್ಟದ ವಿಶೇಷ ಸಭೆ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಆವರಣದಲ್ಲಿ ಇರುವ ರೇವಣಸಿದ್ಧೇಶ್ವರ ಶಾಲಾ ಸಭಾ ಮಂಟಪದಲ್ಲಿ ಅ. 12 ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ.

ಸಂಘದ ರಾಜ್ಯ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಸಂಚಾಲಕ ಜೆ.ಸಿ. ಶಿವಪ್ಪ ಮಂಡ್ಯ ಹಾಗೂ ಇತರ ರಾಜ್ಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಸಂಘ ಆಗಸ್ಟ್‍ನಲ್ಲಿ ನಡೆಸಿದ ಹೋರಾಟದ ಪರಿಣಾಮ ರಾಜ್ಯ ಸರ್ಕಾರ ಸಂಘದ ಬೇಡಿಕೆಗಳ ಈಡೇರಿಕೆ ಭರವಸೆ ನೀಡಿತ್ತು. ಬೇಡಿಕೆ ಈಡೇರಿಕೆಗೆ ಸಂಘ ನ. 1 ರ ಗಡುವು ನೀಡಿತ್ತು. ಹೀಗಾಗಿ ಗಡುವಿನೊಳಗೆ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಮುಂದೆ ಕೈಗೊಳ್ಳಬೇಕಾದ ಹೋರಾಟದ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

1995 ರಿಂದ 2015 ರ ವರೆಗಿನ ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಬಡವರ ಮಕ್ಕಳಿಗೆ ಆಸರೆಯಾದ ಆರ್.ಟಿ.ಇ. ಅನುದಾನ ರಹಿತ ಖಾಸಗಿ ಶಾಲೆಗಳಿಗೂ ವಿಸ್ತರಿಸಬೇಕು. ಶಾಲಾ ಅನುಮತಿ ನವೀಕರಣ ಸರಳೀಕರಿಸಬೇಕು. ಶಾಲಾ, ಕಾಲೇಜು ಕಟ್ಟಡಗಳಿಗೆ ಕರ ವಿನಾಯಿತಿ, ಉಚಿತ ವಿದ್ಯುತ್ ಕೊಡಬೇಕು. ಸಂವಿಧಾನದ 371(ಜೆ) ಕಲಂ ತಿದ್ದಪಡಿ ಉದ್ದೇಶ ಸಾಕಾರಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಅನುದಾನ ಕಲ್ಪಿಸಿ ಖಾಸಗಿ ಶಾಲೆಗಳನ್ನು ಬಲಪಡಿಸಬೇಕು ಎಂಬುದು ಸಂಘದ ಪ್ರಮುಖ ಬೇಡಿಕೆಗಳಾಗಿವೆ.

ಸಭೆಯಲ್ಲಿ ರಾಜ್ಯದ ವಿವಿಧ ಪ್ರಾಂತ, 30 ಜಿಲ್ಲೆಗಳ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ರಾಜ್ಯ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net