

ಬೀದರ್: ಬಸವ ಧರ್ಮ ಪೀಠ, ಬಸವ ಮಹಾಮನೆ ಹಾಗೂ ಇತರ ಬಸವಪರ ಸಂಘಟನೆಗಳ ವತಿಯಿಂದ ಬಸವಕಲ್ಯಾಣ ನಗರದ ಬಸವ ಮಹಾಮನೆ ಆವರಣದಲ್ಲಿ ಶುಕ್ರವಾರದಿಂದ ಮೂರು ದಿನ 24ನೇ ಕಲ್ಯಾಣ ಪರ್ವ ಹಮ್ಮಿಕೊಳ್ಳಲಾಗಿದೆ. ಸಮಾರಂಭವನ್ನು ಅರ್ಥಪೂರ್ಣವಾಗಿ ಆಯೋಜಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಲ್ಯಾಣ ಪರ್ವದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಬಸವರಾಜ ಬುಳ್ಳಾ ಹೇಳಿದರು. ಪೂಜ್ಯ ಮಾತೆ ಗಂಗಾದೇವಿ ದಿವ್ಯ ಸಾನ್ನಿಧ್ಯದಲ್ಲಿ ಉದ್ಘಾಟನೆ, ಸಾಮೂಹಿಕ ಇಷ್ಟಲಿಂಗ, ಗೋಷ್ಠಿ, ಸಮಾರೋಪ ಸೇರಿದಂತೆ ಮೂರು ದಿನ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಶುಕ್ರವಾರ ಬೆಳಗ್ಗೆ 10ಕ್ಕೆ ಧರ್ಮ ಚಿಂತನಗೋಷ್ಠಿ ಇದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸುವರು. ಮಧ್ಯಾಹ್ನ 3ಕ್ಕೆ ಆಯೋಜಿಸಿದ ಮಹಿಳಾ ಗೋಷ್ಠಿಯನ್ನು ಗೀತಾ ಈಶ್ವರ ಖಂಡ್ರೆ ಉದ್ಘಾಟಿಸುವರು. ಪ್ರಾಧ್ಯಾಪಕಿ ವಿಜಯಲಕ್ಷ್ಮೀ ಬಾಳೆಕುಂದ್ರಿ ಉಪನ್ಯಾಸ ನೀಡುವರು ಎಂದು ಹೇಳಿದರು. ಅ.11ರಂದು ಬೆಳಗ್ಗೆ 7.30ಕ್ಕೆ ಶರಣ ವಂದನೆ ಮತ್ತು ಶರಣರಿಗೆ ಶರಣಾರ್ಥಿ ಕಾರ್ಯಕ್ರಮ ಇದೆ. ಬೆಳಿಗ್ಗೆ 10.30ಕ್ಕೆ ಧರ್ಮಚಿಂತನ ಗೋಷ್ಠಿ, ಮಧ್ಯಾಹ್ನ 3ಕ್ಕೆ ರಾಷ್ಟ್ರೀಯ ಬಸವ ದಳದ ಸಮಾವೇಶ, ಸಂಜೆ 5.30ಕ್ಕೆ ಚಿಂತನಾ ಗೋಷ್ಠಿ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡುವರು. ಅ.12ರಂದು ಬೆಳಗ್ಗೆ 9ಕ್ಕೆ ಕೋಟೆ ಆವರಣದಿಂದ ಬಸವಾದಿ ಶರಣರ ಭಾವಚಿತ್ರಗಳ ಮೆರವಣಿಗೆ ನಡೆಯಲಿದ್ದು, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಚಾಲನೆ ನೀಡುವರು. ನಂತರ ಸಮಾರೋಪ ಇದೆ ಎಂದು ವಿವರಿಸಿದರು. ಸ್ವಾಗತ ಸಮಿತಿ ಉಪಾಧ್ಯಕ್ಷ ಕುಶಾಲರಾವ ಪಾಟೀಲ್ ಖಾಜಾಪುರ ಮಾತನಾಡಿ, ಈ ಸಲ ತೆಲಂಗಾಣ, ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳಲಾಗಿದ್ದು, ಎರಡು ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸವ ಭಕ್ತರು ಆಗಮಿಸಲಿದ್ದಾರೆ. ಎಲ್ಲರಿಗೂ ಮೂರು ದಿನ ವಸತಿ, ಉಪಾಹಾರ, ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದರು. ಮಹಾಮನೆಯ ಶ್ರೀ ಸಿದ್ರಾಮೇಶ್ವರ ಸ್ವಾಮೀಜಿ, ಸ್ವಾಗತ ಸಮಿತಿ ಅಧ್ಯಕ್ಷ ಕಂಟೆಪ್ಪ ಗಂದಿಗುಡೆ, ಪ್ರಧಾನ ಕಾರ್ಯದರ್ಶಿ ಶಿವರಾಜ ನರಶೆಟ್ಟಿ, ದಾಸೋಹ ಸಮಿತಿ ಅಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ, ವೇದಿಕೆ ಸಮಿತಿ ಅಧ್ಯಕ್ಷ ಸುರೇಶ ಸ್ವಾಮಿ, ಪ್ರಮುಖರಾದ ಸಂಜೀವಕುಮಾರ ಪಾಟೀಲ್, ವಿಲಾಸ ಪಾಟೀಲ್, ಯೋಗೇಶ್ ಸಿರಿಗೇರೆ, ವೀರಶೆಟ್ಟಿ ಪಾಟೀಲ್, ಮಲ್ಲಿಕಾರ್ಜುನ ಪಂಚಾಕ್ಷರಿ ಇತರರಿದ್ದರು.
ಪೂಜ್ಯ ಮಾತೆ ಗಂಗಾದೇವಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಬಸವಕಲ್ಯಾಣದಲ್ಲಿ ಅ.10ರಿಂದ ಮೂರು ದಿನ ಕಲ್ಯಾಣ ಪರ್ವ ಅದ್ದೂರಿಯಾಗಿ ಆಯೋಜಿಸಲಾಗಿದೆ. ಸಾವಿರಾರು ಜನರಿಗಾಗಿ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ. | ಬಸವರಾಜ ಬುಳ್ಳಾ ಕಲ್ಯಾಣ ಪರ್ವದ ಸ್ವಾಗತ ಸಮಿತಿ ಗೌರವಾಧ್ಯಕ್ಷ