

ಔರಾದ್: ರಾಷ್ಟ್ರೀಯ ಸ್ವಯಂ ಸೇವಕ ಸಂಘ 100 ವರ್ಷ ಪೂರೈಸಿದ ಹಾಗೂ ವಿಜಯದಶಮಿ ನಿಮಿತ್ತ ಪಟ್ಟಣದಲ್ಲಿ ಆರ್ ಎಸ್ ಎಸ್ ಪಥ ಸಂಚಲನ ಜರುಗಿತು.
ಶಾಸಕ ಪ್ರಭು ಚವ್ಹಾಣ್ ಅವರು ಸಂಘದ ಧಿರಿಸಿನಲ್ಲಿ ಕೈಯಲ್ಲಿ ಲಾಠಿ ಹಿಡಿದು ಪಥಸಂಚಲನದ ಕೊನೆಯವರೆಗೂ ಭಾಗವಹಿಸಿ ಸ್ವಯಂ ಸೇವಕರ ಹುಮ್ಮಸ್ಸು ಹೆಚ್ಚಿಸಿದರು. ಪ್ರಮುಖರಾದ ಕಿರಣ ಉಪ್ಪೆ, ಹಣಮಂತರಾವ ಪಾಟೀಲ್, ನಾಗೇಶ ಚನ್ನಾರಡ್ಡಿ, ವಿಜಯಮಹಾಂತೇಶ, ವಸಂತ ವಕೀಲ ಸೇರಿದಂತೆ ಅನೇಕ ಗಣ್ಯರು ಪಥ ಸಂಚಲನದಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಪಟ್ಟಣದ ಬಸವನಗಲ್ಲಿಯ ಅಗ್ನಿ ಬಸವಣ್ಣ ದೇವಸ್ಥಾನದ ಹತ್ತಿರದಿಂದ ಆರಂಭಗೊಂಡ ಪಥ ಸಂಚಲನವು ಪಟ್ಟಣದ ಗಾಂ ಚೌಕ್, ಶೆಟಕಾರ ಗಲ್ಲಿ, ಪಾಂಡುರಂಗ ಮಂದಿರ, ದೇಶಮುಖ ಗಲ್ಲಿ, ಹನುಮಾನ ಮಂದಿರ, ಅಮರೇಶ್ವರ ಮಂದಿರ, ಬಸವೇಶ್ವರ ವೃತ್ತ, ಭವಾನಿ ಮಂದಿರ, ಅಮರೇಶ್ವರ ಕಾಲನಿ, ಎಪಿಎಂಸಿ, ಚನ್ನಬಸವೇಶ್ವರ ವೃತ್ತದ ಮಾರ್ಗವಾಗಿ ಅಮರೇಶ್ವರ ಕಾಲೇಜು ಆವರಣದಲ್ಲಿ ಸಂಪನ್ನಗೊಂಡಿತು.
ಪಥ ಸಂಚಲನದಲ್ಲಿ ಗಣವೇಷಧಾರಿ ಸ್ವಯಂ ಸೇವಕರು ವಾದ್ಯಕ್ಕೆ ತಕ್ಕಂತೆ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು. ನಗರದ ಪ್ರಮುಖ ಬೀದಿಗಳನ್ನು ರಂಗೋಲಿ, ಪುಷ್ಪಗಳಿಂದ ಅಲಂಕರಿಸಿ ಪಥ ಸಂಚಲನವನ್ನು ಸ್ವಾಗತಿಸಿದರು. ಗಣವೇಷಧಾರಿಗಳ ಮೇಲೆ ಪುಷ್ಪಗಳನ್ನು ಹಾಕಿದರು.
ವಿಶೇಷ ಉಪನ್ಯಾಸ ನೀಡಿದ ಸಂಘದ ಪ್ರಮುಖರಾದ ನಾಗೇಶರಡ್ಡಿ ಮಾತನಾಡಿ, ನೂರರ ಸಂಭ್ರಮದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಹಿಂದು ಸಮಾಜವನ್ನು ಜಾಗೃತಗೊಳಿಸುವುದು, ಯುವ ಜನತೆಯಲ್ಲಿ ದೇಶಭಕ್ತಿ ಮೂಡಿಸುವುದು ನಾವೆಲ್ಲ ಒಂದು ಎಂಬ ಭಾವನೆ ಮೂಡಿಸುವ ಜತೆಗೆ ಭವ್ಯ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಶಾಸಕ ಪ್ರಭು ಚವ್ಹಾಣ್ ಮಾತನಾಡಿ, ಯುವಕರಿಗೆ ಶಿಸ್ತು, ದೇಶ ಭಕ್ತಿಯ ಪಾಠ ಹೇಳಿಕೊಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರರ ಸಂಭ್ರಮ. ಈ ನೂರು ವರ್ಷಗಳ ಸೇವೆ ಮತ್ತು ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಘವು ಭಾರತೀಯ ಮೌಲ್ಯಗಳ ಆಧಾರದ ಮೇಲೆ ಬಲಿಷ್ಠ ದೇಶ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.