

ಬೀದರ್: ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರ 51ನೇ ಜನ್ಮ ದಿನಾಚರಣೆ ನಿಮಿತ್ತ ಸ್ವಾಮಿ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ಆಣದೂರ ಗ್ರಾಮದಲ್ಲಿ ಇತ್ತೀಚೆಗೆ 200ಕ್ಕೂ ಅಧಿಕ ಮಹಿಳಾ ಕಾರ್ಮಿಕರಿಗೆ ಸೀರೆ ವಿತರಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಚೇತನ್ ಸೋರಳ್ಳಿ ಮಾತನಾಡಿ, ಬೀದರ್ ದಕ್ಷಿಣ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಗುರಿಯಾಗಿಸಿಕೊಂಡು ಶಾಸಕ ಡಾ.ಬೆಲ್ದಾಳೆ ಅವರು ಕೆಲಸ ಮಾಡುತ್ತಿದ್ದಾರೆ. ಈ ಭಾಗದ ಬಡ ಜನರ, ಕಾರ್ಮಿಕರ ಹಾಗೂ ರೈತರ ಬಗ್ಗೆ ಕಾಳಜಿ ವಹಿಸಿರುವ ಶಾಸಕರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸೀರೆ ವಿತರಿಸಲಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ ಮಾದಪ್ಪ ಮಾತನಾಡಿ, ಜನರ ಬಳಿಯೇ ಹೋಗಿ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸಿ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಶಾಸಕ ಡಾ.ಬೆಲ್ದಾಳೆ ಜನ್ಮ ದಿನವನ್ನು ಕಾರ್ಮಿಕರೊಂದಿಗೆ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಕಿರಣ್ ಬೆಲ್ದಾಳೆ, ಸಹನಾ ಪಾಟೀಲ್, ವಿಶಾಲ ಅತಿವಾಳೆ, ಬಸವರಾಜ ಸಿಂದಬಂದಗಿ, ಸಂತೋಷ ಸೋರಳ್ಳಿ, ಬಸವರಾಜ ಪಾಟೋದಿ, ಶಿವಕುಮಾರ ಕೋಲಾರೆ, ಕಾಶಿನಾಥ ಸೋರಳ್ಳಿ, ಬಸವರಾಜ ತಡಗೂರೆ, ಸಾಯಿಕುಮಾರ, ಅಮರ ಚಾಂಬಳೆ, ಪ್ರವೀಣ್ ಪಾಟೋದಿ ಇತರರಿದ್ದರು.