

ಬೀದರ್: ಬಸವಣ್ಣ ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಮನೆ ಬಿಟ್ಟ ಮಹಾನುಭಾವರು ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ಚಂದ್ರಕಾಂತ ಪಟ್ನೆ ಹೇಳಿದರು.
ನಗರದ ಬಸವಗಿರಿಯಲ್ಲಿ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ನಿಮಿತ್ತ ನಡೆದ ‘ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ತ್ರೀಯರಿಗಿಲ್ಲದ ಧರ್ಮ ಸಂಸ್ಕಾರ ತನಗೂ ಬೇಡವೆಂದು ಬಸವಣ್ಣನವರು ಸ್ತ್ರೀ ಸಮಾನತೆ ಎತ್ತಿ ಹಿಡಿದಿದ್ದರು ಎಂದು ತಿಳಿಸಿದರು.
ಬಸವ ಪೂರ್ವದಲ್ಲಿ ಮಹಿಳೆಯರ ಸ್ಥಿತಿ ಶೂಚನೀಯವಾಗಿತ್ತು. ಸ್ತ್ರೀ ಪೂಜೆಗೆ ಅರ್ಹ. ಆದರೆ, ಸ್ವಾತಂತ್ರ್ಯಕ್ಕೆ ಅನರ್ಹಳೆಂದು ಶೂದ್ರ ವರ್ಗಕ್ಕೆ ಸೇರಿಸಲ್ಪಟ್ಟಿದ್ದಳು. ಆಕೆಗೆ ಬದುಕುವ ಸ್ವಾತಂತ್ರ್ಯವೂ ಇರಲಿಲ್ಲ. ತ್ರೇತಾಯುಗದಲ್ಲಿ ಆಕೆ ಅಪಹರಿಸಲ್ಪಟ್ಟು, ಕಾಡಿಗೆ ಅಟ್ಟಲ್ಪಟ್ಟಳು. ದ್ವಾಪರದಲ್ಲಿ ಜೂಜಿಗಿಡಲ್ಪಟ್ಟು, ತುಂಬಿದ ಸಭೆಯಲ್ಲಿ ವಸ್ತ್ರ ಅಪಹರಿಸಲ್ಪಟ್ಟಳು ಎಂದು ಹೇಳಿದರು.
ಬಸವಯುಗ ಆರಂಭವಾಗುತ್ತಲೇ ಸ್ತ್ರೀ ಮೈಕೊಡವಿ ಎದ್ದು ನಿಂತಳು. ಅಕ್ಕ ಮಹಾದೇವಿ ರಾಜನಿಗೆ ಮೂರು ಕರಾರುಗಳನ್ನು ವಿಧಿಸುವ ಮಟ್ಟಿಗೆ ಬೆಳೆದರೆ, ಮುಕ್ತಾಯಕ್ಕ ಅಲ್ಲಮರೊಂದಿಗೆ ಸಂವಾದ ಮಾಡಿದಳು ಎಂದು ತಿಳಿಸಿದರು.
ಮೋಳಿಗೆ ಮಹಾದೇವಿ, ಆಯ್ದಕ್ಕಿ ಲಕ್ಕಮ್ಮರು ತಮ್ಮ ತಮ್ಮ ಪತಿಗೆ ಮಾರ್ಗದರ್ಶನ ಮಾಡಿ, ಪತಿಯಿಂದಲೇ ಗುರುವೆಂದು ಗೌರವಿಸಲ್ಪಟ್ಟರು. ಆಧ್ಯಾತ್ಮ ಸಾಧನೆಯಲ್ಲೂ 12ನೇ ಶತಮಾನದಲ್ಲಿ ಮಹಿಳೆಯರು ಹಿಂದೆ ಬೀಳಲಿಲ್ಲ. ಬಸವ ಕೃಪೆಯಿಂದ ಅಕ್ಷರ ಕಲಿತು ವಚನಗಳನ್ನು ಬರೆದರು. ಬಸವಣ್ಣನವರು ಪ್ರವಾಹದ ವಿರುದ್ಧ ಈಜಲಿಲ್ಲ. ನದಿಯ ದಿಕ್ಕನ್ನೇ ಬದಲಿಸಿದರು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಮೊಲೆ ಮೂಡಿ ಬಂದಡೆ ಹೆಣ್ಣೆಂಬರು, ಗಡ್ಡ ಮೀಸೆ ಬಂದಡೆ ಗಂಡೆಂಬರು, ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ, ಗಂಡೂ ಅಲ್ಲ ಎಂದು ಸಮಾನತೆಯ ಪರಾಕಾಷ್ಠೆ ಮೆರೆದವರು ಶರಣರು ಎಂದು ನುಡಿದರು.
ಶರಣ ಸತಿ ಲಿಂಗ ಪತಿ ಭಾವ ಶರಣರದು. ಲೋಕವನ್ನಾಳುವ ಪರಮಾತ್ಮನೊಬ್ಬನೆ ಜಗದ ಗಂಡಸೆಂಬುದು ಅವರ ಅಭಿಮತ. ಬಟ್ಟಾಗಿ ಹುಟ್ಟಿದ ನಮಗೆ ಬೆಟ್ಟವಾಗಿ ರೂಪಿಸಿದ ಮಹಾ ತಾಯಿ ಸ್ತ್ರೀಗೆ ಶೂದ್ರಳೆಂದು ಜರಿಯುವುದು ಸರಿಯಲ್ಲ ಎಂದು ಹೇಳಿದರು.
ಇಷ್ಟಲಿಂಗ ಜನಕ ಬಸವಣ್ಣನವರು ಪ್ರಪ್ರಥಮವಾಗಿ ಇಷ್ಟಲಿಂಗ ದೀಕ್ಷೆ ನೀಡಿದ್ದು ಅಕ್ಕನಾಗಮ್ಮ ತಾಯಿಗೆ. ಅದಕ್ಕಾಗಿಯೇ ಬಸವಣ್ಣನವರನ್ನು ಮಾತೃಹೃದಯಿ ಎನ್ನುತ್ತಾರೆ. ತಾಯಿಯಂತೆ ಭೇದವಿಲ್ಲದಂತೆ ಸರ್ವರಿಗೂ ಮೇಲೆತ್ತಿದರು. ಶರಣರ ತತ್ವ ಅಪ್ಪಿಕೊಂಡ ಅಕ್ಕ ಅನ್ನಪೂರ್ಣ ತಾಯಿಯವರು ಸಹ ಭೇದ ಮಾಡದೆ ಎಲ್ಲರನ್ನು ಮಕ್ಕಳಂತೆ ಕಂಡರು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಹುಮನಾಬಾದ್‍ನ ಬಸವ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ. ಎಸ್.ಆರ್. ಹಿರೇಮಠ ಮಾತನಾಡಿ, ನಮ್ಮನ್ನೆಲ್ಲ ಬಸವ ಬೆಳಕಿನೆಡೆಗೆ ತಂದವರು ಅಕ್ಕ ಅನ್ನಪೂರ್ಣತಾಯಿ. ನಮ್ಮ ಬದುಕು ಅವರಿಂದ ಹಸನಾಯಿತು. ಬಸವ ಮಾರ್ಗ ಅತ್ಯಂತ ಸರಳ, ಆ ಮಾರ್ಗ ನಮಗೆ ಸಿಕ್ಕಿದ್ದು ನಮ್ಮ ಪುಣ್ಯ. ಮಹಿಳೆಯರಿಗೆ ದೈವತ್ವ ಕೊಟ್ಟವರು ಬಸವಣ್ಣ. ಅದಕ್ಕೆ ಉದಾಹರಣೆ ಅಕ್ಕ ಎಂದು ತಿಳಿಸಿದರು.
ಇಚ್ಛಾ ನಿವೃತ್ತಿ ಹೊಂದಿದ ನ್ಯಾಯವಾದಿ ಅಶೋಕ ಮಹಾಲಿಂಗ ಅವರನ್ನು ಸನ್ಮನಿಸಲಾಯಿತು.
ನಿವೃತ್ತ ಎಇಇ ಸೂರ್ಯಕಾಂತ ಬಿರಾದಾರ, ಬಸವಾನುಯಾಯಿ ಮಡಿವಾಳಯ್ಯ ಸ್ವಾಮಿ, ಹುಮನಾಬಾದ್ ಬಸವ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಮಲ್ಲಿಕಾರ್ಜುನ ಸಂಗಮಕರ್, ನೀಲಮ್ಮನ ಬಳಗದ ಸಂಗೀತಾ ಗಣಾಚಾರಿ, ರೂಪಾ ಮಲ್ಲಿಕಾರ್ಜುನ ಹಂಡೆ, ಸಾಹಿತಿ ರಮೇಶ ಮಠಪತಿ ಇದ್ದರು.
ಉಷಾ ಬೆಳಕೋಟೆ ವಚನ ಪಠಣ ಮಾಡಿದರು. ಸಂತೋಷ ಹಂಗರಗಿ ನಿರೂಪಿಸಿದರು. ಲಕ್ಷ್ಮಿ ಪ್ರವೀಣ್ ಬಿರಾದಾರ ಸ್ವಾಗತಿಸಿದರು. ರಮೇಶ ಬೆಳಕೋಟೆ ಭಕ್ತಿ ದಾಸೋಹಗೈದರು.