

ಬೀದರ್: ಕಲ್ಯಾಣ ಕ್ರಾಂತಿ ಜಗತ್ತಿನಲ್ಲಿಯೇ ಅಪೂರ್ವ ಚಳವಳಿ. ಮಾನವ ಕುಲದ ಸರ್ವಾಂಗೀಣ ಉನ್ನತಿಯೇ ಅದರ ಗುರಿಯಾಗಿತ್ತು ಎಂದು ಸಾಹಿತಿ ರಮೇಶ ಮಠಪತಿ ಹೇಳಿದರು.
ಮರಣವೇ ಮಹಾ ನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ನಿಮಿತ್ತ ಇಲ್ಲಿಯ ಬಸವಗಿರಿಯಲ್ಲಿ ಭಾನುವಾರ ನಡೆದ ಕಲ್ಯಾಣ ಕ್ರಾಂತಿ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವರ್ಣ, ವರ್ಗ, ಜಾತಿ, ಮೇಲು-ಕೀಳು, ಬಡವ-ಬಲ್ಲಿದ ಮೊದಲಾದ ಭೇದಗಳನ್ನು ಅಳಿಸಿ, ಸರ್ವ ಸಮಾನತೆಯ ಸಮಾಜ ಕಟ್ಟಲು ಬಸವಾದಿ ಶರಣರು ಪರಿಶ್ರಮಿಸಿದರು ಎಂದು ತಿಳಿಸಿದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಮಾಜೋ-ಧಾರ್ಮಿಕ ಸ್ವಾತಂತ್ರ್ಯ ಕಲ್ಪಿಸಿದರು. ಶತ ಶತಮಾನಗಳಿಂದ ಶೂದ್ರರೆಂದು ಪರಿಗಣಿಸಲ್ಪಟ್ಟಿದ್ದ ಮಹಿಳೆಯರನ್ನು ಪುರುಷನ ಸಮಾನವಾಗಿ ಎದ್ದು ನಿಲ್ಲಿಸಿದ್ದು ಶರಣರ ಹೆಗ್ಗಳಿಕೆ ಎಂದು ಹೇಳಿದರು.
ಶರಣರ ತತ್ವಗಳನ್ನು ನೆನಪಿಸಿಕೊಳ್ಳುವ ಉತ್ಸವವೇ ಮರಣವೇ ಮಹಾ ನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ. ಹರಳಯ್ಯ-ಮಧುವರಸರಾದಿಗಳು ‘ನಾಳೆ ಬಪ್ಪುದು ನಮಗಿಂದೆ ಬರಲಿ, ಇದಕ್ಕಾರಂಜುವರು’ ಎಂದು ಬಸವ ತತ್ವಕ್ಕಾಗಿ ಮರಣವೇ ಮಹಾ ನವಮಿಯಾಗಿ ಸ್ವೀಕರಿಸಿದ್ದರು ಎಂದು ತಿಳಿಸಿದರು.
ಬಸವಣ್ಣನವರು ಧರೆಗಿಳಿದ ದಿನದಂದೇ ಅಸ್ಪøಶ್ಯ ಬಾಲಕ ಕೇತನ ಶಿಕ್ಷೆ ರದ್ದಾಯಿತು. ಅಂದೇ ಕಲ್ಯಾಣ ಕ್ರಾಂತಿಯ ಬೀಜಾಕುಂರವಾಯಿತು. ಹೆಣ್ಣು ಶೂದ್ರಳು-ಆಕೆಗೆ ಜನಿವಾರ ಹಾಕಲಾಗದೆಂದಾಗ 7-8ರ ಬಾಲಕ ಬಸವಣ್ಣ ಉಪನಯನ ಧಿಕ್ಕರಿಸಿ ಮನೆ ಬಿಟ್ಟಾಗ ಕಲ್ಯಾಣ ಕ್ರಾಂತಿ ಮೊಳಕೆಯೊಡೆಯಿತು. ಕೂಡಲಸಂಗಮದಲ್ಲಿ ಇಷ್ಟಲಿಂಗ ಆವಿಷ್ಕರಿಸಿದಾಗ ಮರವಾಯಿತು. ಕಲ್ಯಾಣದಲ್ಲಿ ಅನುಭವ ಮಂಟಪ, ಮಹಾ ಮನೆಯ ಮೂಲಕ ಹೆಮ್ಮರವಾಯಿತು ಎಂದು ಹೇಳಿದರು.
ಕಲ್ಯಾಣ ಕ್ರಾಂತಿಯ ಕೊನೆಯ ಘಟ್ಟದಲ್ಲಿ ರಾಜಕೀಯ ಉದ್ದೇಶಗಳು ಬೆರೆತು ಕಲ್ಯಾಣ ಹೊತ್ತಿ ಉರಿಯಿತು. ಅನೇಕ ಶರಣರ ಬಲಿದಾನವಾಯಿತು. ಹರಳಯ್ಯ-ಮಧುವರಸ-ಶೀಲವಂತರಿಗೆ ಎಳೆಹೂಟೆ ಶಿಕ್ಷಕೆಯಾಯಿತು ಎಂದು ಹೇಳಿದರು.
ಶರಣರು ಎದೆಗುಂದದೆ ಮನುಕುಲದ ಉದ್ಧಾರಕ್ಕಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ವಚನ ಸಾಹಿತ್ಯ ಬೆನ್ನಿಗೆ ಕಟ್ಟಿಕೊಂಡು ಬಿಜ್ಜಳನ ಸೈನ್ಯ ಹಾಗೂ ವರ್ಣವಾದಿಗಳೊಡನೆ ಹೋರಾಡಿ ಜಯ ಸಾಧಿಸಿ, ಉಳಿವಿಯಲ್ಲಿ ವಚನಗಳನ್ನು ಸಂರಕ್ಷಿಸಿದರು ಎಂದು ತಿಳಿಸಿದರು.
ಅಂದು ಆರಂಭವಾದ ಕಲ್ಯಾಣ ಕ್ರಾಂತಿ ನಿರಂತರವಾಗಿದೆ. ಸಮಾಜದ ಕೊನೆಯ ವ್ಯಕ್ತಿಗೂ ಸಮಾಜೋ-ಧಾರ್ಮಿಕ ಸಮಾನತೆ, ನ್ಯಾಯ ದೊರೆಯುವವರೆಗೂ ನಡೆಯುತ್ತದೆ. ಅಕ್ಕ ಅನ್ನಪೂರ್ಣತಾಯಿಯವರು ಶರಣರ ಬಲಿದಾನ ಜನ-ಜಗತ್ತು ಮರೆಯಬಾರದೆಂದು ವಚನ ವಿಜಯೋತ್ಸವ ಮತ್ತು ಮರಣವೇ ಮಹಾನವಮಿಗಳ ಆಚರಣೆ ಜಾರಿಗೆ ತಂದರು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಕೋಟಿ ಕೋಟಿ ವೀರಗಂಣಗಳಾಗಬಹುದು. ಹರಳಯ್ಯ-ಮಧುವಯ್ಯಗಳಾಗುವುದು ಸುಲಭವಲ್ಲ. ಅವರ ಬಲಿದಾನ ನಮ್ಮೆಲ್ಲದ ಶ್ರದ್ಧೆ ಉಕ್ಕಿಸುವುದರಲ್ಲಿ ಸಂದೇಹವಿಲ್ಲ. ಸತ್ಯದ ದಾರಿ ಎಂದಿಗೂ ಮರೆಯಬಾರದು ಎಂದು ಹೇಳಿದರು.
ನಾವೆಲ್ಲ ವಚನಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮಾದರಿಯಾದರೆ ಜಗತ್ತು ಬಸವಣ್ಣನವರನ್ನು ವಿಶ್ವಗುರುವಾಗಿ ಸ್ವೀಕರಿಸುತ್ತದೆ. ಇಡೀ ಮನುಕುಲ ಬಸವ ತತ್ವವನ್ನು ಒಪ್ಪಿಕೊಳ್ಳುವ ಕಾಲ ಬಂದೇ ಬರುತ್ತದೆ ಎಂದರು.
ಗುದಗೆ ಆಸ್ಪತ್ರೆಯ ಡಾ. ಶಾರದಾ ಗುದಗೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಶ್ರೀಕಾಂತ ಬಿಕ್ಲೆ, ನಿರ್ಮಲಾ ಎಂಟರ್‍ಪ್ರೈಸೆಸ್ ವ್ಯವಸ್ಥಾಪಕ ಸಿದ್ರಾಮ ಬಿರಾದಾರ, ನೀಲಮ್ಮನ ಬಳಗದ ಶ್ರೀದೇವಿ ಶರಣಬಸವ ಮಠಪತಿ, ಪ್ರತಿಭಾ ಪಾಟೀಲ ಇದ್ದರು.
ಜನೌಷಧಿ ಮೆಡಿಕಲ್ ಅನೀಶ್ ಪಾಖಾಲ್ ವಚನ ಪಠಣ ಮಾಡಿದರು. ಡಾ. ಬಸವ ದೀಪ್ತಿ ಹಾಗೂ ಶ್ಯಾಮಲಾ ಎಲಿ ವಚನ ಗಾಯನ ಮಾಡಿದರು.
ಲಿಂಗಾಯತ ಮಹಾ ಮಠದ ಕಾರ್ಯದರ್ಶಿ ಚನ್ನಬಸಪ್ಪ ಹಂಗರಗಿ ನಿರೂಪಿಸಿದರು. ಆನಂದ ವಡ್ಡನಕೇರಿ ಸ್ವಾಗತಿಸಿದರು. ನೀಲಾಂಬಿಕೆ ಶಿವಕುಮಾರ ಪಾಖಾಲ್ ಭಕ್ತಿ ದಾಸೋಹಗೈದರು.