ಔರಾದ್: ಔರಾದ್ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮತ್ತು ಕಮಲನಗರ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರುವ ಕಾಲ ಸನ್ನಿಹಿತವಾಗಿದೆ. ಕ್ಷೇತ್ರದ ಜನತೆಗೆ ಶೀಘ್ರ ಸಹಿ ಸುದ್ದಿ ದೊರೆಯುವ ನಿರೀಕ್ಷೆಯಿದೆ ಎಂದು ಶಾಸಕ ಪ್ರಭು ಚವ್ಹಾಣ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಔರಾದ ಪಟ್ಟಣ ಪಂಚಾಯಿತಿ ಪುರಸಭೆಯಾಗಬೇಕು ಮತ್ತು ಕಮಲನಗರ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಬೇಕು ಎನ್ನುವುದು ಜನತೆಯ ಬಹುದಿನಗಳ ಬೇಡಿಕೆಯಾಗಿದೆ. ಇದಕ್ಕಾಗಿ ನಾನು ಸುಮಾರು ವರ್ಷಗಳಿಂದ ನಿರಂತರ ಪ್ರಯತ್ನಿಸುತ್ತಿದ್ದೇನೆ. ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಿಗೆ ಪದೇ ಪದೇ ಪತ್ರಗಳನ್ನು ಬರೆಯುತ್ತಿದ್ದು, ಸಾಕಷ್ಟು ಸಲ ಖುದ್ದಾಗಿ ಭೇಟಿ ನೀಡಿ ಮನವಿ ಸಲ್ಲಿಸಿದ್ದೇನೆ.
ಡಾ.ನಂಜುಂಡಪ್ಪ ವರದಿಯನ್ವಯ ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಔರಾದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಔರಾದ ಪಟ್ಟಣ ಪಂಚಾಯಿತಿ ಹಾಗೂ ಕಮಲನಗರ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರದ ಮೇಲೆ ಒತ್ತಡ ಹಾಕುತ್ತಲೇ ಬರುತ್ತಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕೆಲಸ ತ್ವರಿತವಾಗಿ ಮಾಡಲು ನಿರಂತರ ಶ್ರಮ ಪಡುತ್ತಿದ್ದೇನೆ.
ಹಿಂದೆ ಜನಸಂಖ್ಯೆ ಕೊರತೆ ಹಾಗೂ ಮತ್ತಿತರೆ ಕಾರಣಗಳಿಂದ ಕೆಲಸ ಆಗಿರಲಿಲ್ಲ. ಔರಾದ್ ಪಟ್ಟಣ ಪಂಚಾಯತಿ ಪುರಸಭೆಯಾಗಿ ಮತ್ತು ಕಮಲನಗರ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಎಲ್ಲ ಮಾನದಂಡಗಳನ್ನು ಹೊಂದಿದ್ದು, ಇದಕ್ಕಿರುವ ಎಲ್ಲ ಅಡೆತಡೆಗಳನ್ನು ಸರಿಪಡಿಸಲಾಗಿದೆ. ಇದೀಗ ನನ್ನ ಮನವಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನನ್ನ ನಿರಂತರ ಪ್ರಯತ್ನಕ್ಕೆ ಫಲ ಸಿಗುವ ಕಾಲ ಹತ್ತಿರ ಬಂದಿದೆ.
ಔರಾದ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಂಡಿದ್ದು, ಈಗಲಾಗಲೇ ಮಾಸ್ಟರ್ ಪ್ಲಾನ್‌ಗೆ ಸರ್ಕಾರದಿಂದ ಮಂಜೂರಾತಿ ಪಡೆಯಲಾಗಿದೆ. ರಸ್ತೆ, ಕುಡಿಯುವ ನೀರು ಸೇರಿದಂತೆ ಎಲ್ಲ ಅವಶ್ಯಕ ಮೂಲಸೌಕರ್ಯಗಳನ್ನು ಪೂರೈಸುತ್ತಿದ್ದು, ಪಟ್ಟಣದ ಸೌಂಧರ್ಯ ಹೆಚ್ಚಿಸಲು ಎಲ್ಲ ರೀತಿಯ ಕ್ರಮಗಳನ್ನು ವಹಿಸಲಾಗುತ್ತಿದೆ. ಔರಾದ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಿದಲ್ಲಿ ಹೆಚ್ಚಿನ ಅನುದಾನ ಲಭಿಸಿ ಅಭಿವೃದ್ಧಿ ಕೆಲಸಗಳಿಗೆ ಮತ್ತಷ್ಟು ವೇಗ ಸಿಗಲಿದೆ.
ಕಮಲನಗರ ತಾಲ್ಲೂಕು ಕೇಂದ್ರದಲ್ಲಿಯೂ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದು, ಸದ್ಯಕ್ಕೆ ಗ್ರಾಮ ಪಂಚಾಯಿತಿಯಾಗಿರುವ ಕಮಲನಗರವು ಪಟ್ಟಣ ಪಂಚಾಯಿತಿಯಾದ ನಂತರ ಸರ್ಕಾರದಿಂದ ಹೆಚ್ಚುವರಿ ಅನುದಾನ ದೊರೆತು ಅಭಿವೃದ್ಧಿ ಕೆಲಸಗಳು ತೀವ್ರ ಗತಿಯಲ್ಲಿ ನಡೆಯಲು ಸಾಧ್ಯವಾಗಲಿದೆ. ಹಾಗೂ ಸಾರ್ವಜನಿಕರಿಗೂ ಕೂಡ ಸಾಕಷ್ಟು ಅನುಕೂಲವಾಗುತ್ತದೆ ಎಂದು ಶಾಸಕರು ತಿಳಿಸಿದ್ದಾರೆ.