

ಬೀದರ್: ಇಂದು ಲಂಚ- ವಂಚನೆಗಳ ಬಳ್ಳಿ ಎಲ್ಲೆಡೆ ಬೆಳೆದಿದೆ ಎಂದು ಗೋರ್ಟಾ(ಬಿ) ನೀಲಮ್ಮನ ಬಳಗದ ಆರತಿ ಯರನಳ್ಳೆ ಕಳವಳ ವ್ಯಕ್ತಪಡಿಸಿದರು.
ನಗರದ ಬಸವಗಿರಿಯಲ್ಲಿ ಮರಣವೇ ಮಹಾ ನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ನಿಮಿತ್ತ ನಡೆದ ಲಂಚ-ವಂಚನೆಗೆ ಕೈಯಾನದ ಭಾಷೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನೇಕ ಶರಣರು, ಮಹಾತ್ಮರು, ದೇಶ ಭಕ್ತರ ತ್ಯಾಗ, ಬಲಿದಾನದಿಂದ ವಿಶ್ವಗುರುವೆನಿಸಬೇಕಾದ ಭಾರತದಲ್ಲಿ ಭ್ರಷ್ಟ ಮನಗಳು ಹುಟ್ಟಿಕೊಂಡಿರುವುದು ದುರಂತ ಎಂದರು.
12ನೇ ಶತಮಾನದಲ್ಲಿ ಕಸ ಗುಡಿಸುವ ಲಕ್ಕಮ್ಮ ದಾರಿಯಲ್ಲಿ ಹೊನ್ನನಾಣ್ಯ ಬಿದ್ದರೂ ಮುಟ್ಟಲಾರೆನೆಂದು ಛಲ ತೊಟ್ಟಿದ್ದಳು. ಆಯ್ದಕ್ಕಿ ಲಕ್ಕಮ್ಮ ಪತಿ ಮಾರಯ್ಯ ಎರಡು ಸೇರು ಅಕ್ಕಿ ಹೆಚ್ಚಿಗೆ ತಂದರೆ ‘ಈಸಕ್ಕಿ ಆಸೆ ನಿಮಗೇಕೆ’ ಎಂದು ಮರಳಿಸಿದ್ದು ಸಾಮಾನ್ಯವಲ್ಲ ಎಂದು ನುಡಿದರು.
ಶರಣೆಯರಂಥ ಶುದ್ಧ ಮನಸ್ಸುಗಳು ರೂಪುಗೊಂಡಾಗ ಲೋಕಾಯುಕ್ತದ ಅವಶ್ಯಕತೆಯೇ ಇರುವುದಿಲ್ಲ. ಮನೆ ಮನೆಯ ತಾಯಂದಿರು ಲೋಕಾಯುಕ್ತರಾಗಬೇಕೆಂದು ಅಕ್ಕ ಅನ್ನಪೂರ್ಣತಾಯಿ ಕರೆಯಿತ್ತದ್ದನ್ನು ನೆನಪಿಸಿದರು.
ದುಡಿಯುವ ಪ್ರವೃತ್ತಿ ಹೆಚ್ಚಾದರೆ ನೀಡುವ ಕೈಗಳು ಹೆಚ್ಚುತ್ತವೆ. ಸಮಾಜದಲ್ಲಿ ಸುಭಿಕ್ಷೆ ನೆಲೆಗೊಳ್ಳುತ್ತದೆ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಲಂಚದ ಆಸೆಯಿಂದ ವಂಚನೆ ಆರಂಭವಾಗುತ್ತದೆ. ಇಂದು ಜಗತ್ತು ಎದುರಿಸುತ್ತಿರುವ ದೊಡ್ಡ ಪಿಡುಗು ಲಂಚ- ವಂಚನೆ. ಆದರೆ, ಇವುಗಳಲ್ಲಿ ಸಿಲುಕಿದವರು ಪರಮತೆಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮಾನವನ ನಿಜವಾದ ಗುರಿ ತನ್ನ ಮೂಲವಾದ ಪರಮಾತ್ಮನಲ್ಲಿ ಒಂದಾಗುವುದು. ಲಿಂಗಪೂಜೆ, ಲಿಂಗಯೋಗದಿಂದ ಗುರಿ ಸೇರಬಹುದು. ಲಿಂಗಪೂಜೆಯ ಫಲ ದೊರಕಬೇಕಾದರೆ ಅನ್ಯಾಯ ಸೋಕದಿರಬೇಕು. ಲಂಚ-ವಂಚನೆಯಿಂದ ಇನ್ನೊಬ್ಬರ ಶೋಷಣೆ ಮಾಡಬಾರದು ಎಂದು ಹೇಳಿದರು.
ಕಣ್ಣಲ್ಲಿಯ ಆಸೆ ಕಳೆದಲ್ಲದೆ, ಕಾಯಕದ ಕೈಗಳು ಶುದ್ಧವಿಲ್ಲದೆ ದೇವರು ಸಿಗಲಾರ. ಭಕ್ತರು ಕಾಯಕವೆಂದು ವಾಮಮಾರ್ಗದಿಂದ ತಂದರೆ ಅದು ಶರಣರ ದೃಷ್ಟಿಯಲ್ಲಿ ಸಲ್ಲದ ಗಳಿಕೆ ಎಂದು ತಿಳಿಸಿದರು.
ಸತ್ಯ ಶುದ್ಧ ಕಾಯಕ ಸುಖಿ ಜೀವನದ ಮಾರ್ಗ. ಅದರಿಂದ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ. ಜೀವನ ಲವಲವಿಕೆಯಿಂದ ಕೂಡಿರುತ್ತದೆ. ಶಿವಯೋಗಿಯಾದವನಿಗೆ ಆಸೆ, ರೋಷ, ಹರುಷಾದಿಗಳು ಇಲ್ಲವಾಗಿ ಸಕಲ ಜೀವಗಳಲ್ಲಿ ಸಮಭಾವವಿರಬೇಕು ಎಂದು ಬಸವಣ್ಣನವರು ಹೇಳಿದ್ದಾರೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ನೀಲಮ್ಮ ರೂಗನ್ ಮಾತನಾಡಿ, ಹೊನ್ನಿನೊಳಗೊಂದೇರೆಯ, ಸೀರೆಯೊಳಗೊಂದು ಎಳೆಯ ಬೇಕೆಂದಡೆ ನಿಮ್ಮಾಣೆ ಎಂಬ ಬಸವಣ್ಣನವರ ವಚನ ವಿಧಾನಸೌಧ, ಸಂಸತ್ತು ಮತ್ತು ಕಚೇರಿಗಳಲ್ಲಿ ತೂಗು ಹಾಕಬೇಕು ಎಂದು ಅಕ್ಕ ಹೇಳುತ್ತಿದ್ದರು ಎಂದು ಅಕ್ಕ ಅನ್ನಪೂರ್ಣತಾಯಿ ಅವರನ್ನು ನೆನೆದು ಭಾವುಕರಾದವರು. ಆಗ ಸಭಿಕರ ಕಣ್ಣಾಲಿಗಳು ತೇವವಾದವು.
ನಿವೃತ್ತ ಮುಖ್ಯಶಿಕ್ಷಕ ರೇವಣಪ್ಪ ಮೂಲಗೆ, ನೀಲಮ್ಮನ ಬಳಗದ ಪ್ರಭಾವತಿ ಮಾಣಿಕಪ್ಪ ಗೋರನಾಳೆ, ಲಾವಣ್ಯ ಚನ್ನಬಸಪ್ಪ ಹಂಗರಗಿ, ಸಾಹಿತಿ ರಮೇಶ ಮಠಪತಿ ಇದ್ದರು.
ಸಂಗೀತಾ ಆರ್. ಪಾಟೀಲ ವಚನ ಪಠಣ ಮಾಡಿದರು. ಗುರುಶ್ರೀ ವಚನ ಗಾಯನ ಮಾಡಿದರು.
ಗೋರ್ಟಾ(ಬಿ) ಲಿಂಗಾಯತ ಸೇವಾ ದಳದ ಪ್ರಜ್ವಲ್ ಸಂತೋಷ್ ರಾಜೋಳೆ ನಿರೂಪಿಸಿದರು. ಬಸವ ಚಿಕ್ಕಲಿಂಗೆ ಸ್ವಾಗತಿಸಿದರು.