

ಬೀದರ್: ಬಸವಣ್ಣನವರು ಆವಿಷ್ಕರಿಸಿದ ಇಷ್ಟಲಿಂಗ ದೀನ, ದಲಿತರು, ಮಹಿಳೆಯರು ಸೇರಿದಂತೆ ಎಲ್ಲರಿಗೂ ದೇವ ಪೂಜೆಯ ಸ್ವಾತಂತ್ರ್ಯ ನೀಡಿತು ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.
ಇಲ್ಲಿಯ ಬಸವಗಿರಿಯಲ್ಲಿ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವದ ಮೂರನೇ ದಿನವಾದ ಗುರುವಾರ ನಡೆದ ಲಿಂಗಾಯತ ಧರ್ಮದಲ್ಲಿ ದೇವಪೂಜೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಷ್ಟಲಿಂಗ ಸಮಾಜದಲ್ಲಿನ ಏರು-ಪೇರುಗಳನ್ನು ಹೊಡೆದು ಹಾಕಿತು. ಇಷ್ಟಲಿಂಗ ಪೂಜೆಯಿಂದ ಸಮ ಸಮಾಜ ನಿರ್ಮಿಸಲು ಸಾಧ್ಯವಾಯಿತು ಎಂದು ತಿಳಿಸಿದರು.
ದೇವರ ನಿಜವಾದ ಸ್ವರೂಪ ಅರಿಯದೆ ದೇವರ ಹುಡುಕಾಟದಲ್ಲಿ ಜಗತ್ತು ಬಳಲುತ್ತಿದೆ. ತಪ್ಪು ತಿಳಿವಳಿಕೆಯಿಂದ ಜನ ದುಃಖ, ಅನಾವಶ್ಯಕ ಸಮಯ, ಸಂಪತ್ತು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಬಸವಣ್ಣನವರು ಜಗದಗಲ, ಮುಗಿಲಗಲ, ಮಿಗೆಯಗಲವಾದ, ಸಾವಿಲ್ಲದ, ಕೇಡಿಲ್ಲದ, ರೂಪಿಲ್ಲದ ದೇವರ ಸ್ವರೂಪವನ್ನು ತಿಳಿಸಿದ್ದಾರೆ ಎಂದು ಹೇಳಿದರು.
ಚರಾಚರ ಜಗತ್ತನ್ನು ತನ್ನೊಡಲೊಳಗೆ ಇಟ್ಟುಕೊಂಡು ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣನಾದ ಪರಮಾತ್ಮನನ್ನು ಚುಳುಕಾಗಿ ಇಷ್ಟಲಿಂಗ ರೂಪದಲ್ಲಿ ನಮ್ಮ ಕರಕೆ ತಂದು ಕೊಟ್ಟಿದ್ದಾರೆ. ಲಿಂಗಾಯತ ಧರ್ಮದಲ್ಲಿ ಇಷ್ಟಲಿಂಗವನ್ನು ಪೂಜಿಸುವುದೇ ನಿಜವಾದ ದೇವಪೂಜೆ ಎಂದು ನುಡಿದರು.
ಬದುಕು ಗಜಿ ಬಿಜಿಯಾಗದೆ, ಶೋಷಣಾ ಮುಕ್ತವಾಗಲು ಇಷ್ಟಲಿಂಗ ಧರಿಸಿ, ಪೂಜಿಸಿ ಧನ್ಯರಾಗಬೇಕು ಎಂದು ತಿಳಿಸಿದರು.
ಮುಖ್ಯ ಅನುಭಾವ ಮಂಡಿಸಿದ ಕೃಷಿ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ನಿಂಗದಳ್ಳಿ ಅವರು, ಲಿಂಗವನರಿಯದೆ ಏನನರಿದಡೆಯೂ ಫಲವಿಲ್ಲ. ಲಿಂಗಾಯತದಲ್ಲಿ ದೇವರನ್ನು ಇಷ್ಟಲಿಂಗವೆಂದು ಕರೆಯುತ್ತಾರೆ. ಶಿವಯೋಗ ಸಾಧನೆಯಿಂದ ಕಲ್ಯಾಣ ಕ್ರಾಂತಿ ಸಾಧ್ಯವಾಯಿತು ಎಂದು ಹೇಳಿದರು.
ಇಷ್ಟಲಿಂಗಕ್ಕೆ ಆಕರ್ಷಿತರಾಗಿ ಜಗತ್ತಿನ ಮೂಲೆ ಮೂಲಗಳಿಂದ ಜನ ಕಲ್ಯಾಣಕ್ಕೆ ಬಂದರು. ಕನ್ನಡ ಕಲಿತು, ವಚನ ಓದಿ, ಬರೆದು ಶಿವಯೋಗ ಸಾಧನೆಯ ಉತ್ತುಂಗಕ್ಕೇರಿದರು ಎಂದು ತಿಳಿಸಿದರು.
ನಮ್ಮ ಸಂಸ್ಕøತಿಯ ಉಳಿವಿಗೆ ಮುಂದಿನ ಪೀಳಿಗೆಗೆ ವಚನ ಓದಿಸಬೇಕು. ಶಿವಯೋಗದಲ್ಲಿ ತೊಡಗಿಸಬೇಕು. ಶಿವಯೋಗ ಸಾಧಕರಿಗಾಗಿಯೇ ವಿಶೇಷ ಶಿಬಿರಗಳು ನಡೆಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಾಂಜ್ರಾ ಮಹಿಳಾ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಮಾತನಾಡಿ, ಅಕ್ಕ ಅನ್ನಪೂರ್ಣತಾಯಿ ಅವರು ದೇಶ, ವಿದೇಶ ಸುತ್ತಿ ಬಸವ ತತ್ವ ಪ್ರಚಾರ ಮಾಡಿದ್ದು ಜಿಲ್ಲೆಗೆ ಹೆಮ್ಮೆ. ಅದೇ ದಾರಿಯಲ್ಲಿ ಮುನ್ನಡೆಯುತ್ತಿರುವ ಪ್ರಭುದೇವ ಸ್ವಾಮೀಜಿ ಅವರು ಧರ್ಮ ಪ್ರಸಾರಗೈಯುತ್ತಿರುವುದು ಸಂತಸದ ಸಂಗತಿ. ಉತ್ತಮ ವಾಗ್ಮಿಗಳಾದ ಶ್ರೀಗಳಿಗೆ ಉತ್ತಮ ಭವಿಷ್ಯವಿದೆ ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ಚಂದ್ರಶೇಖರ ಹಂಗರಗಿ, ನೀಲಮ್ಮನ ಬಳಗದ ಸುರೇಖಾ ನಾಗೇಂದ್ರಪ್ಪ ವಡ್ಡನಕೇರಿ, ವಿಜಯಲಕ್ಷ್ಮಿ ಗೋರ್ಟೆಕರ್, ಸಾಹಿತಿ ರಮೇಶ ಮಠಪತಿ ಇದ್ದರು.
ವಿಭಾ ಶೀಲವಂತ ನಾವದಗೆರೆ ವಚನ ಪಠಣ ಮಾಡಿದರು. ಗುರುಶ್ರೀ ಶಾಂತಲಿಂಗಯ್ಯ ನಿರೂಪಿಸಿದರು. ಆಶಾ ಆಕಾಶ ಕೋಟೆ ಸ್ವಾಗತಿಸಿದರು.