

ಬೀದರ್: ವಚನಗಳಲ್ಲಿ ಆದರ್ಶ ದಾಂಪತ್ಯದ ಮಾರ್ಗದರ್ಶನ ಇದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಹೇಳಿದರು.
ನಗರದ ಶರಣ ಉದ್ಯಾನದಲ್ಲಿ ಮರಣವೇ ಮಹಾ ನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವದ ಎರಡನೇ ದಿನವಾದ ಬುಧವಾರ ನಡೆದ ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದ ಶಿವಂಗೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ಮೂಲ ಘಟಕ ಕುಟುಂಬ. ಕುಟುಂಬದ ಕೇಂದ್ರ ಬಿಂದು ದಂಪತಿ. ಸತಿ-ಪತಿಗಳು ಒಂದಾಗಿದ್ದರೆ ಕುಟುಂಬದಲ್ಲಿ ಸಂತೋಷ- ಆನಂದ ಇರುತ್ತದೆ. ಸತಿ-ಪತಿಗಳಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ದುಃಖದ ಆಗರ ಆಗುತ್ತದೆ ಎಂದು ತಿಳಿಸಿದರು.
ದಾಂಪತ್ಯದಲ್ಲಿ ಸರಸ ದಾಂಪತ್ಯ, ವಿರಸ ದಾಂಪತ್ಯ, ಸಮರಸ ದಾಂಪತ್ಯ, ಅನುಕೂಲ ದಾಂಪತ್ಯ, ಅನುರಾಗ ದಾಂಪತ್ಯ, ವಿಚಿತ್ರ ದಾಂಪತ್ಯಗಳಿವೆ ಎಂದು ಹೇಳಿದರು.
ನಿಜವಾದ ದಾಂಪತ್ಯ ದೇಹ ಎರಡಾದರೂ ಭಾವ ಒಂದಾಗುವಂತೆ ಇರಬೇಕು. ಎಣ್ಣೆ-ಬತ್ತಿ ಸೇರಿದಾಗ ಮಾತ್ರ ಜ್ಯೋತಿ ಬೆಳಗಲು ಸಾಧ್ಯ. ಹಾಗೆಯೇ ತಾಳ್ಮೆ, ಹೊಂದಾಣಿಕೆಯಿಂದ ಇಬ್ಬರ ಮನಸ್ಸು ಒಂದಾಗಿದ್ದರೆ ದೇವರ ಮುಂದೆ ನಂದಾದೀಪ ಬೆಳಗಿದಂತೆ ಎಂದು ತಿಳಿಸಿದರು.
ಬಸವಣ್ಣ-ನೀಲಮ್ಮ, ದಾಸ-ದುಗ್ಗಳೆ, ಆಯ್ದಕ್ಕಿ ಮಾರಯ್ಯ-ಲಕ್ಕಮ್ಮರ ಆದರ್ಶಗಳನ್ನು ಅನುಸರಿಸಿದರೆ ಬದುಕು ಬಂಗಾರವಾಗುತ್ತದೆ ಎಂದು ಹೇಳಿದರು.
ಬಸವಾದಿ ಶರಣರ ಕ್ರಾಂತಿಯಿಂದಾಗಿ ಇಂದು ಮಹಿಳೆ ಅಕ್ಷರ ಕಲಿತು ಎಲ್ಲ ಕ್ಷೇತ್ರಗಳಲ್ಲಿ ಪುರುಷನ ಸರಿಸಮನಾಗಿ ದುಡಿಯಲು ಸಾಧ್ಯವಾಗಿದೆ ಎಂದು ಉದ್ಘಾಟನೆ ನೆರವೇರಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ತಿಳಿಸಿದರು.
ವಚನಗಳ ಮಾರ್ಗದಲ್ಲಿ ನಡೆದರೆ ಸರ್ವ ಸಾಧನೆ ಸಾಧ್ಯ. ಸತಿ-ಪತಿಗಳು ಪರಸ್ಪರ ಪ್ರಗತಿಗೆ ಸಹಕರಿಸಿದಾಗ ಸ್ವರ್ಗಕ್ಕೆ ಕಿಚ್ಚು ಹಚ್ಚುವಂಥ ಜೀವನ ನಮ್ಮದಾಗುತ್ತದೆ ಎಂದು ಹೇಳಿದರು.
ಸಂಸಾರವೆಂದರೆ ಮಾಯೆ, ದುಃಖವೆಂದ ಪ್ರಪಂಚಕ್ಕೆ ಸಂಸಾರವೆಂದರೆ ಸದ್ಗತಿ ಎಂದು ತೋರಿದವರು ಬಸವಣ್ಣನವರು. ಸತಿ-ಪತಿ ಜತೆ ಜತೆಯಾಗಿ ಸದ್ಗತಿ ಸಾಧಿಸುವ ಸತ್ಯದ ದಾರಿ ತೋರಿಸಿದರು ಎಂದು ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ನುಡಿದರು.
ಕಾಲುಗಳೆರಡಾದರೂ ಪರಸ್ಪರ ಅನೂನ್ಯತೆಯಿಂದ ನಡೆದರೆ ಮಾತ್ರ ಗುರಿ ತಲುಪುವಂತೆ, ದಂಪತಿ ಒಂದಾಗಿ ಸಾಗಬೇಕು ಎಂದು ತಿಳಿಸಿದರು.
ಹುಳಿವಿಡಿದು ತುಪ್ಪವ ಕಾಣುವಂತೆ, ಅಕ್ಷರವಿಡಿದು ವಿದ್ಯೆವನರಿವಂತೆ, ಅನ್ನವ ಉಂಡು ಚೈತನ್ಯವ ಪಡೆವಂತೆ, ಸತಿವಿಡಿದು ನಿರ್ವಾಣಗತಿ ಕಾಣಬೇಕೆನ್ನುತ್ತಾರೆ ಶರಣರು. ಇಂದಿನ ದಿನಮಾನಗಳಲ್ಲಿ ಈ ಆದರ್ಶಗಳು ಮರೆಯಾಗಿ ವಿಚ್ಛೇದನಗಳು ಹೆಚ್ಚುತ್ತಿವೆ. ಕಾರಣ, ಶರಣರ ದಾಂಪತ್ಯದ ಆದರ್ಶ ಸಮಾಜದಲ್ಲಿ ಬಿತ್ತುವ ಅವಶ್ಯಕತೆ ಇದೆ ಎಂದು ಹೇಳಿದರು.
ಎಲ್ಲಕ್ಕೂ ದೊಡ್ಡದು ಆತ್ಮ ಸಂಧಾನ. ಸಂಸಾರದಲ್ಲಿದ್ದರೂ ಆಧ್ಯಾತ್ಮದ ಆ ಎತ್ತರಕ್ಕೆ ಏರಲು ಸಾಧ್ಯವೆಂದು, ಸಾಧಿಸಿ ತೋರಿದವರು ಶರಣರು ಎಂದು ತಿಳಿಸಿದರು.
ಲಿಂಗಾಯತ ಮಹಾಮಠದ ಪ್ರಮುಖರಾದ ಅಶೋಕ ಎಲಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಚೇತನಾ ಪಾಟೀಲ, ಸಿ.ಎಸ್. ಗಣಾಚಾರಿ, ಚಿಂಚೋಳಿಯ ಬಸವ ಸೇವಾ ಪ್ರತಿಷ್ಠಾನದ ಉದಯ ಪಾಟೀಲ ಉಪಸ್ಥಿತರಿದ್ದರು.
ಲಿಂಗಾಯತ ಸೇವಾ ದಳದ ಭಾಗ್ಯಶ್ರೀ ಶಿವಪ್ರಸಾದ ವಚನ ಪಠಣ, ಶ್ರೀದೇವಿ ಶರಣಬಸವ ಹಾಗೂ ಶ್ಯಾಮಲಾ ಎಲಿ ವಚನ ಗಾಯನ ಮಾಡಿದರು.
ಶಿಲ್ಪಾ ಮಹೇಶ ಮಜಗೆ ನಿರೂಪಿಸಿದರು. ಡಾ. ಪ್ರಿಯಾ ಎಲಿ ಸ್ವಾಗತಿಸಿದರು. ಶಿವಾನಿ ರೇವಣಸಿದ್ಧ ಗಣಾಚಾರಿ ಭಕ್ತಿ ದಾಸೋಹಗೈದರು.